ಬಸವಕಲ್ಯಾಣ: ಒಗ್ಗಟ್ಟಿನಲ್ಲಿ ಬಲವಿದೆ. ನಾವೆಲ್ಲರೂ ಒಂದು ಎನ್ನುವ ಭಾವ ಬೆಳೆಸಿಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಎಲ್ಲ ಕ್ಷೇತ್ರಗಳಲ್ಲಿಯೂ ಸಮಾಜ ಪ್ರಗತಿ ಸಾಧಿಸಲು ಅನುಕೂಲವಾಗುತ್ತದೆ ಎಂದು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ ಹೇಳಿದರು.
ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ತಾಲೂಕು ಆಡಳಿತದಿಂದ ಮಂಗಳವಾರ ಆಯೋಜಿಸಿದ್ದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಪ್ರಗತಿಗೆ ಶೈಕ್ಷಣಿಕ ಪ್ರಗತಿ ಅವಶ್ಯಕ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ನೀಡುವಲ್ಲಿ ಪಾಲಕರು ಕಾಳಜಿ ವಹಿಸಬೇಕು ಎಂದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರು ಮಲ್ಲಪ್ಪ ಕೋಟೆ ವಿಶೇಷ ಉಪನ್ಯಾಸ ನೀಡಿ, ಬಸವಣ್ಣನವರ ಸಮಕಾಲೀನ ಶ್ರೇಷ್ಠ ಶರಣರಾಗಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳು ಮನುಕುಲಕ್ಕೆ ಮಾರ್ಗದರ್ಶಿಯಾಗಿದ್ದು, ಮನಸ್ಸು ಪರಿವರ್ತನೆ ಮಾಡುವ ಶಕ್ತಿ ಅವರ ವಚನಗಳಿಗಿದೆ. ಜಾತಿ ವ್ಯವಸ್ಥೆ ಮತ್ತು ಮೂಢನಂಬಿಕೆ ವಿರುದ್ಧ ಕಠೋರವಾಗಿ ವಚನಗಳ ಮೂಲಕ ತಿಳಿಸಿಕೊಟ್ಟಿದ್ದಾರೆ. ವಚನಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ನಗರಸಭೆ ಅಧ್ಯಕ್ಷ ಎಂ.ಡಿ.ಸಗಿರೋದ್ದಿನ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಸುಲ್ಫಿ, ಸಿಪಿಐ ಅಲಿಸಾಬ್, ಸಮಾಜದ ಮುಖಂಡ ದತ್ತು ಪದ್ಮೆ, ರಾಮಣ್ಣ ಮಂಠಾಳೆ, ಶಂಕರರಾವ ಜಮಾದಾರ, ಅರ್ಜುನ ಕನಕ, ಗೋವಿಂದ ಚಾಮಲೆ, ಮಲ್ಲಿಕಾರ್ಜುನ ಬೊಕ್ಕೆ, ನಾಗಣ್ಣ ಚಾಮಲೆ, ಈಶ್ವರ ಬೊಕ್ಕೆ, ಶರಣಪ್ಪ ಕೆಜಿ, ಚಂದ್ರಕಾಂತ ಮೇತ್ರೆ, ರೇಖಾ ಹೊಸಮನಿ, ತುಕಾರಾಮ ರೊಡ್ಡೆ ಇತರರಿದ್ದರು.
ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ ಸ್ವಾಗತಿಸಿದರು. ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರವೀಂದ್ರನಾಥ ಶಿವರಾಮನೋರ್ ನಿರೂಪಣೆ ಮಾಡಿದರು.
ಕೋಟೆಯಿಂದ ಅಂಬೇಡ್ಕರ್ ವೃತ್ತದ ಮೂಲಕ ಬಿಕೆಡಿಬಿ ಕಲ್ಯಾಣ ಮಂಟಪದವರೆಗೆ ಮುಖ್ಯರಸ್ತೆ ಮಾರ್ಗವಾಗಿ ಚೌಡಯ್ಯನವರ ಭಾವಚಿತ್ರ ಭವ್ಯ ಮೆರವಣಿಗೆ ಜರುಗಿತು. ಶಾಸಕ ಶರಣು ಸಲಗರ ಚಾಲನೆ ನೀಡಿದರು. ಅಧಿಕಾರಿಗಳು, ಪ್ರಮುಖರು ಭಾಗವಹಿಸಿದ್ದರು.