ಬಾಗಲಕೋಟೆ: ನಮ್ಮ ಖರ್ಗೆ ಸಾಹೇಬರು ಗಪ್ ಚುಪ್ ಬಾಯಿ ಮುಚ್ಚಿಕೊಂಡು ಕೂರಬೇಕು ಎಂದು ಸೂಚನೆ ಕೊಟ್ಟಿದ್ದಾರೆ. ಅದರಂತೆ ನಾವೆಲ್ಲ ಗಪ್ ಚುಪ್ ಕೂತಿದ್ದೇವೆ. ನಮ್ಮ ಪಕ್ಷದಲ್ಲಿ ಒಂದು ಶಿಸ್ತು ಇದೆ. ಅದರಂತೆ ಇರುತ್ತೇವೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಸಿಎಂ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ತೂರಿ ಬಂದ ಪ್ರಶ್ನೆಗೆ ಭಾನುವಾರ ಬಾಗಲಕೋಟೆಯಲ್ಲಿ ಅವರ ಈ ರೀತಿ ಪ್ರತಿಕ್ರಿಯೆ ನೀಡಿದರು.
ನಮ್ಮ ಹಿರಿಯರು ಪಕ್ಷದ ವಿಚಾರವಾಗಿ ಯಾವುದನ್ನೂ ಮಾತನಾಡಬೇಡಿ ಎಂದಿದ್ದಾರೆ. ನಾವು ಏನನ್ನೂ ಮಾತನಾಡುವುದಿಲ್ಲ. ಖರ್ಗೆ ಅವರು ಒಂದೇ ಒಂದು ಮಾತು ಹೇಳಿದ ಬಳಿಕ ನಮ್ಮಲ್ಲಿ ಯಾರು ಬಾಯಿ ಬಿಟ್ಟಿಲ್ಲ. ಆದರೆ, ಬಿಜೆಪಿ ನೋಡಿ. ಅಲ್ಲಿ ಪ್ರತಿ ದಿನವೂ ಹೇಳುತ್ತಾರೆ. ಅವರು ಪ್ರತಿ ದಿನವೂ ಬಾಯಿ ಬಿಡುತ್ತಾರೆ. ನಮ್ಮದು ಶಿಸ್ತಿನ ಪಕ್ಷ. ಈ ಬಗ್ಗೆ ನಮಗೆ ಖುಷಿ ಎಂದು ಬಿಜೆಪಿ ಮುಖಂಡರನ್ನು ತಿವಿದರು.
ಕಾಂಗ್ರೆಸ್ ಪಕ್ಷಕ್ಕೆ ಶ್ರೀರಾಮುಲು ಅವರನ್ನು ಆವ್ಹಾನಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಲ್ಲಿ ಅವರವರೆ ಜಗಳವಾಡಿ ಬರುತ್ತಾರೆ ಎಂದರೆ ಅವರನ್ನು ನಾವೇಕೆ ಕರೆಯಲು ಹೋಗಬೇಕು. ಬಿಜೆಪಿಯಲ್ಲಿ ತುಂಬಾ ಗಲಾಟೆ ಶುರುವಾಗಿದೆ. ಜೆಡಿಎಸ್‌ನಲ್ಲೂ ಜಿ.ಟಿ.ದೇವೇಗೌಡ, ಕುಮಾರಸ್ವಾಮಿ ಏನೇನು ಮಾತನಾಡುತ್ತಿದ್ದಾರೆ ನೋಡಿ ಎಂದರು.
ಡಿಕೆಶಿ ಅವರ ಶ್ರೀರಾಮುಲು ಅವರಿಗೆ ಆವ್ಹಾನ ನೀಡಿದ್ದಾರಂತಲ್ಲ ಎನ್ನುವ ಪ್ರಶ್ನೆಗೆ, ಆವ್ಹಾನ ಏನು? ಅವರವರಲ್ಲೆ ಗಲಾಟೆ ಇದೆ. ನಮ್ಮ ಮನೆ ಗೋಡೆ ಬೇರೆ, ನಿಮ್ಮನೆ ಗೋಡೆ ಬೇರೆ ಎಂದು ಗೋಡೆ ಕಟ್ಟಿಕೊಂಡಿದ್ದಾರೆ. ಅಂತಹ ಮನೆಯಲ್ಲಿ ಹೇಗೆ ಇರುತ್ತಾರೆ. ಅಲ್ಲಿಂದ ಕಿತ್ತುಕೊಂಡು ಬರಬಹುದು ಎನ್ನುವುದು ನಮ್ಮ ಅನಿಸಿಕೆ. ಅವರು ಬಂದರೆ ಪ್ಲಸ್ಸೋ, ಮೈನಸ್ಸೋ ಒಬ್ಬರು ಪಕ್ಷ ಬಿಟ್ಟು ಬರುತ್ತಾರೆ ಎಂದರೆ ನಾವು ಕರೆದುಕೊಳ್ಳುತ್ತೇವೆ ಎಂದು ಶ್ರೀರಾಮುಲು ಅವರಿಗೆ ಕಾಂಗ್ರೆಸ್ ಪಕ್ಷದ ಬಾಗಿಲು ತೆರೆದಿದೆ ಎನ್ನುವ ಸೂಚನೆ ನೀಡಿದರು.
ಇನ್ನು ರಾಮುಲು ಅವರನ್ನು ಕಾಂಗ್ರೆಸ್‌ಗೆ ಕರೆದು ಸತೀಶ್ ಜಾರಕಿಹೊಳಿ ಪ್ರಭಾವ ಕುಗ್ಗಿಸುವ ಪ್ರಯತ್ನ ನಡೆದಿದೆ ಎಂದು ಜನಾರ್ಧನ ರೆಡ್ಡಿ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ತಿಮ್ಮಾಪುರ, ಯಾರನ್ನು ಕರೆದು ಯಾರನ್ನೋ ಮುಗಿಸಲು ಆಗುವುದಿಲ್ಲ. ಸತೀಶ್ ಜಾರಕಿಹೊಳಿ ಅವರದ್ದೆ ಒಂದು ಸ್ಟೆÊಲ್ ಇದೆ. ಇನ್ನೊಬ್ಬರು ಬಂದು ಅವರನ್ನು ಕುಗ್ಗಿಸುತ್ತಾರೆ ಎನ್ನುವುದು ಸಾಧ್ಯವಿಲ್ಲದ ಮಾತು ಹೇಳಿದರು.