ಹಾಸನ : ನಾವು ಕುಟುಂಬ ರಾಜಕಾರಣ ಮಾಡುತ್ತಿಲ್ಲ. ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಗೊಂದಲಗಳಿಲ್ಲ. ಪ್ರಜ್ವಲ್ ಹೇಳಿದರೂ ಅಷ್ಟೇ, ಸೂರಜ್ ಹೇಳಿದರೂ ಅಷ್ಟೆ. ವಿಧಾನಸಭೆ ಚುನಾವಣೆಗೆ ಹಾಸನ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳನ್ನು ನಮ್ಮ ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹಾಗೂ ಜಿಲ್ಲೆಯ ಆರು ಶಾಸಕರು ಕುಳಿತು ತೀರ್ಮಾನ ಕೈಗೊಳ್ಳುತ್ತೇವೆ. ಅದೇ ಅಂತಿಮ. ಪಕ್ಷದ ತೀರ್ಮಾನಕ್ಕೆ ನಮ್ಮ ಕುಟುಂಬ ಬದ್ಧವಾಗಿರುತ್ತದೆ ಎಂದು ಶಾಸಕ ಎಚ್.ಡಿ. ರೇವಣ್ಣ ಸ್ಪಷ್ಟಪಡಿಸಿದರು.
ನಗರದ ಸಂಸದರ ನಿವಾಸದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಸಂಬಂಧಿಸಿದಂತೆ ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕಿವೆ. ಜಿಲ್ಲೆಯ ಜನತೆ ನಮ್ಮ ಕುಟುಂಬಕ್ಕೆ ರಾಜಕೀಯ ಶಕ್ತಿ ತುಂಬಿದ್ದಾರೆ. ಅದನ್ನು ನಾವು ಉಳಿಸಿಕೊಳ್ಳತ್ತೇವೆ. ಮುಂದಿನ 2023ಕ್ಕೆ ಹಾಸನ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲ್ಲಲಿದ್ದು, ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಜಿಲ್ಲೆಯನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಹಿಂದೆ ಎಚ್.ಡಿ. ಕುಮಾರಸ್ವಾಮಿ ಆಡಳಿತದಲ್ಲಿ ಜಿಲ್ಲಾ ಆಸ್ಪತ್ರೆ ವೈದ್ಯಕೀಯ ಕಾಲೇಜು ಅಭಿವೃದ್ಧಿಗೆ 250 ಕೋಟಿ ರೂ. ಅನುದಾನ ನೀಡಿದ್ದಕ್ಕೆ ಹಾಸನ ಬಜೆಟ್ ಎಂದು ಟೀಕಿಸಿದ್ದರು. ಕುಮಾರಸ್ವಾಮಿ ಸರ್ಕಾರದಲ್ಲಿ ಹಾಸನ ಜಿಲ್ಲಾ ನೀರಾವರಿ ಕಾಮಗಾರಿಗಳಿಗೆ ನೀಡಿದ್ದ ಅನುದಾನವನ್ನು ಯಡಿಯೂರಪ್ಪ ಸಿಎಂ ಆದ ಮೇಲೆ ನಿಲ್ಲಿಸಿದ್ದರು ಎಂದು ನೇರ ಆಪಾದನೆ ಮಾಡಿದರು.
ಕುಮಾರಸ್ವಾಮಿ ರೇವಣ್ಣ ಹೊಡೆದಾಡುತ್ತಾರೆ ಎಂದು ಇತರ ಪಕ್ಷಗಳು ಅಂದುಕೊಂಡಿದ್ದರೆ ಅವರಿಗೆ ಭ್ರಮನಿರಸನವಾಗುತ್ತದೆ. ನಾವು ಜಗಳವಾಡಿದರೆ ಬೆಳಗ್ಗೆಯೊಳಗೆ ಒಂದಾಗುತ್ತೇವೆ. ನಾನು ಬದುಕಿರುವವರೆಗೂ ನಮ್ಮ ಕುಟುಂಬದಲ್ಲಿ ಯಾವುದೇ ಕೌಟುಂಬಿಕ ಸಮಸ್ಯೆ ಉದ್ಭವಿಸುವುದಿಲ್ಲ ಎಂದರು.
ಕುಮಾರಸ್ವಾಮಿಗೆ ಎರಡು ಬಾರಿ ಹೃದಯ ಶಸ್ತ್ರ ಚಿಕಿತ್ಸೆ ಅಗಿದ್ದರು ಸಹ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ. ಅವರ ಪ್ರತಿಯೊಂದು ಹೆಜ್ಜೆಗೂ ನನ್ನ ಬೆಂಬಲವಿದೆ ಎಂದರು.
ಎರಡೂ ರಾಷ್ಟ್ರೀಯ ಪಕ್ಷಗಳು ಕುಟುಂಬ ರಾಜಕಾರಣ ಎಂದು ಬೊಬ್ಬೆ ಹೊಡೆಯುತ್ತಿವೆ. ನಾವೊಬ್ಬರೇ ಕುಟುಂಬ ರಾಜಕಾರಣ ಮಾಡುತ್ತಿದ್ದರೆ ಪ್ರಜ್ವಲ್ ಹಾಗೂ ಸೂರಜ್ ಇಬ್ಬರಿಂದಲೂ ಈಗಲೇ ರಾಜೀನಾಮೆ ಕೊಡಿಸುತ್ತೇನೆ ಎಂದು ಸವಾಲು ಹಾಕಿದರು.
ಕುಮಾರಸ್ವಾಮಿ ಕೊಟ್ಟ ಮಾತಿಗೆ ತಕ್ಕಂತೆ ನಡೆದುಕೊಳ್ಳುವ ಏಕೈಕ ರಾಜಕಾರಣಿ, ಮಾತು ಕೊಟ್ಟಂತೆ ಎಂಟು ಸಾವಿರ ಕೋಟಿ ರೈತರ ಹಾಗೂ ಅಪೆಕ್ಸ್ ಬ್ಯಾಂಕ್ನ 20 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ಈ ಎರಡೂ ರಾಷ್ಟ್ರೀಯ ಪಕ್ಷಗಳು ಕೋಟಿಗಟ್ಟಲೇ ಸಾಲಮಾಡಿ ರೈತರ ಮನೆ ಹಾಳು ಮಾಡುತ್ತಿವೆ. ರೈತರಿಗೆ ಸರಿಯಾಗಿ ವಿದ್ಯುತ್ ಸರಬರಾಜು ಮಾಡದೆ ನಷ್ಟ ಅನುಭವಿಸುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಬಿಜೆಪಿ ಸರ್ಕಾರ ಕೆಪಿಟಿಸಿಎಲ್ ಅನ್ನು ಖಾಸಗಿಯವರ ವಶಕ್ಕೆ ನೀಡಲಿದೆ ಎಂದು ಆರೋಪಿಸಿದರು.
ಕಾಂಗ್ರೆಸ್‌ನವರಿಗೆ ಮಾನ ಮರ್ಯಾದೆ ಇಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡು ಮುನಿಯಪ್ಪ, ದೇವೇಗೌಡರು ಮತ್ತು ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿದರು. ರುಮಕೂರಿನ ಬಿಜೆಪಿ ಸಂಸದರೇ ಬಹಿರಂಗವಾಗಿ ಈ ವಿಷಯ ಹೇಳಿದ್ದಾರೆ ಎಂದರು.
ಹಾಸನದಲ್ಲಿ ಪ್ರತ್ಯೇಕ ಹೈಕಮಾಂಡ್ ಇಲ್ಲ, ರಾಜ್ಯದ ಎಲ್ಲಾ ಕ್ಷೇತ್ರಗಳ ಟಿಕೆಟ್ ಅನ್ನು ರಾಜ್ಯಮಟ್ಟದಲ್ಲೇ ತೀರ್ಮಾನ ಮಾಡಲಾಗುವುದು. ಇನ್ನು ಮುಂದೆ ಅವರಿಗೆ ಇವರಿಗೆ ಟಿಕೆಟ್ ನೀಡಿ ಎಂದು ಪಕ್ಷದ ಕಾರ್ಯಕರ್ತರು ಪ್ರತಿಭಟನೆ ಮಾಡದಂತೆ ಸೂಚನೆ ನೀಡಲಾಗಿದೆ. ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುವಂತೆ ತಿಳಿಸಲಾಗಿದೆ ಎಂದರು.