ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ ಕೊನೆಭಾಗಕ್ಕೆ ಸಮರ್ಪಕ ನೀರು ಹರಿಸಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಸಿರವಾರ ಪಟ್ಟಣದಲ್ಲಿ ಶುಕ್ರವಾರದಿಂದ ಅನಿರ‌್ಷ್ಟ ಸಂಚಾರ ತಡೆ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ತಿಳಿಸಿದರು.
ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಎರಡು ದಿನಗಳ ಹಿಂದೆ ಸಂಚಾರ ತಡೆ ನಡೆಸಿದಾಗ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಅಕಾರಿಗಳು ರೈತ ಮುಖಂಡರ ಸಭೆ ಕರೆದು ಸಮಸ್ಯೆ ಇತ್ಯರ್ಥಗೊಳಿಸುವ ಭರವಸೆ ನೀಡಲಾಗಿತ್ತು. ಆದರೆ ಜಿಲ್ಲಾಕಾರಿಗಳು ಸಭೆ ಕರೆಯದ ಕಾರಣ ಹೋರಾಟ ಮುಂದುವರಿಸಲಾಗುತ್ತಿದೆ ಎಂದರು.
ತುಂಗಭದ್ರ ಎಡದಂಡೆ ಕಾಲುವೆ ಕೊನೆಭಾಗದ ರೈತರ ಭೂಮಿಗೆ ನೀರು ಹರಿಸುವಲ್ಲಿ ನೀರಾವರಿ ನಿಗಮದ ಅಕಾರಿಗಳು ಸಂಪುರ್ಣವಾಗಿ ವಿಫಲರಾಗಿದ್ದಾರೆ. ಐಸಿಸಿ ಸಭೆ ನಿರ್ಣಯಗಳನ್ನು ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ. ಮೇಲ್ಭಾಗದಲ್ಲಿ ಅಕ್ರಮವಾಗಿ ನೀರು ಪಡೆಯುತ್ತಿರುವುದನ್ನು ತಡೆಯಲು ಸಾಧ್ಯವಾಗದೇ ಇರುವದರಿಂದ ಗೇಜ್ ನಿರ್ವಹಣೆ ಆಗುತ್ತಿಲ್ಲ.
ಸಿರವಾರದಲ್ಲಿ ನಡೆದ ಹೋರಾಟದ ಸಂದರ್ಭದಲ್ಲಿ ತಹಸೀಲ್ದಾರರು ಸ್ಥಳಕ್ಕೆ ಆಗಮಿಸಿ ಪ್ರಾದೇಶಿಕ ಆಯುಕ್ತರ ನೇತ್ವತ್ವದಲ್ಲಿ ಸಭೆ ನಿಗದಿಗೊಳಿಸುವ ಭರವಸೆ ನೀಡಿದ್ದರು. ಅದರಂತೆ ಜಿಲ್ಲಾಕಾರಿಗಳಿಗೂ ಮಾಹಿತಿ ನೀಡಿದ್ದರು. ಗುರುವಾರ ನಿಗದಿಯಾಗಿದ್ದ ಪ್ರಾದೇಶೀಕ ಆಯುಕ್ತರ ಸಭೆ ರದ್ದುಗೊಂಡಿದೆ.
ಕೊಪ್ಪಳ ಜಿಲ್ಲೆಯ ಮೇಲ್ಭಾದ ಅಕಾರಿಗಳು ತಪ್ಪು ಮಾಹಿತಿ ನೀಡಿ ಪ್ರಾದೇಶೀಕ ಆಯುಕ್ತರಿಗೆ ದಿಕ್ಕುತಪ್ಪಿಸಿದ್ದಾರೆ. 47 ಮೈಲ್‌ನಲ್ಲಿ 11.5 ಅಡಿ ಗೇಜ್ ನೀರುಹರಿಸಲು ಸೂಚಿಸಲಾಗಿದೆ. ಈ ಗೇಜ್ ನೀರು ಹರಿಸಿದರೆ ಕೆಳಭಾಗಕ್ಕೆ ನೀರು ಬರುವದಿಲ್ಲ. ಕನಿಷ್ಠ 12.5 ಅಡಿ ನೀರು ಹರಿಸಿದರೆ ಮಾತ್ರ ಕೆಳಭಾಗಕ್ಕೆ ನೀರು ಬರುತ್ತದೆ.
ಇಲ್ಲಿಯವರೆಗೆ ಅಹಿಂಸಾತ್ಮಕ ಹೋರಾಟ ಮಾಡುತ್ತಾ ಬರಲಾಗಿದೆ. ಆದರೆ ಚುನಾಯಿತ ಜನಪ್ರತಿನಿಗಳು, ಅಕಾರಿಗಳು ಸ್ಪಂದಿಸುತ್ತಿಲ್ಲ. ರೈತರ ತಾಳ್ಮೆ ಪರೀಕ್ಷೆ ಮಾಡದೆ ಹೋರಾಟ ಉಗ್ರ ಸ್ವರೂಪ ಪಡೆಯುವ ಮುಂಚೆ ನಿರೀಕ್ಷಿತ ಗೇಜ್ ನಿರ್ವಹಣೆ ಮಾಡಬೇಕು ಎಂದು ಚಾಮರಸ ಮಾಲಿಪಾಟೀಲ್ ಒತ್ತಾಯಿಸಿದರು.
ಬಿಜೆಪಿ ಮುಖಂಡ ಶಂಕರಗೌಡ ಹರವಿ ಮಾತನಾಡಿ, ಮೈಲ್ 69ರಲ್ಲಿ ತಪ್ಪು ಗೇಜ್ ಅಳವಡಿಸಲಾಗಿದೆ. ಒಂದು ಫೀಟ್ ನೀರು ಕಡಿಮೆ ಅಳತೆ ಮಾಪನ ಮಾಡಲಾಗುತ್ತಿದೆ. ಅಕಾರಿಗಳ ಗಮನಕ್ಕೆ ತಂದರೂ ಸರಿಪಡಿಸುತ್ತಿಲ್ಲ. ಮೇಲ್ಬಾಗದ ಶಾಸಕರುಗಳು ಅಕ್ರಮ ನೀರಾವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಪಕ್ಷಬೇಧ ಮರೆತು ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜೆ.ಶರಣಪ್ಪಗೌಡ, ಚುಕ್ಕಿ ಸೂಗಪ್ಪ ಸಾಹುಕಾರ, ಅಮರೇಶ ಹೊಸಮನಿ, ವೈ.ಬಸನಗೌಡ ಬಲ್ಲಟಗಿ ಉಪಸ್ಥಿತರಿದ್ದರು.