ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಸಬಾ ಹೋಬಳಿ ಜಾಜೂರು ಗ್ರಾಮದಲ್ಲಿ ಏ.13 ರಿಂದ 17ರವರೆಗೆ ಗ್ರಾಮ ದೇವರುಗಳಾದ ಹೊನ್ನಾಲದಮ್ಮ ದೇವಿ, ವೀರಭದ್ರೇಶ್ವರ ಸ್ವಾಮಿ ಮತ್ತು ಅಮ್ಮಯ್ಯಜ್ಜಿ ದೇವರ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
13 ರಂದು ಬೆಳಗ್ಗೆ ಧ್ವಜಾರೋಹಣ, ಸಂಜೆ ಗ್ರಾಮ ದೇವರುಗಳ ಮದುವಣಿಗೆ ಶಾಸ್ತ್ರ ಜರುಗಲಿದೆ. 14 ರಂದು ಬೆಳಗ್ಗೆ ನಾಗತಿಹಳ್ಳಿ ಗ್ರಾಮದಲ್ಲಿ ಮದುವಣಿಗೆ ಶಾಸ್ತ್ರ, ಸಂಜೆ ನಾಗತಿಹಳ್ಳಿ ಮರುಳಸಿದ್ದೇಶ್ವರ ಸ್ವಾಮಿ ಹಾಗೂ ತಿಪಟೂರು ತಾಲೂಕು ಹೊಸಪಟ್ಟಣ ಗ್ರಾಮದ ಗ್ರಾಮದೇವತೆ ಅಂತರಘಟ್ಟಮ್ಮ ದೇವಿ ಮತ್ತು ಧೂತರಾಯ ಸ್ವಾಮಿ ದೇವರ ಆಗಮನದೊಂದಿಗೆ ಗುರುಪರುವು ನಡೆಯಲಿದೆ.
15ರಂದು ಬೆಳಗ್ಗೆ ಕಾಟಿಕೆರೆ ಗ್ರಾಮದಲ್ಲಿ ದೇವರುಗಳ ಮದುವಣಿಗೆ ಶಾಸ್ತ್ರ, ರಾತ್ರಿ ಹೊನ್ನಾಲದಮ್ಮ ದೇವಿ, ಅಮ್ಮಯ್ಯಜ್ಜಿ ದೇವಿ, ಚಿಕ್ಕಮ್ಮ ದೇವಿಯರ ಆರತೀಬಾನ, ಬೇವಿನ ಸೀರೆ, ಬಾಯಿಬೀಗ, ಯಾದವರ ಹಟ್ಟಿ ಗ್ರಾಮಸ್ಥರಿಂದ ಆರತೀಬಾನ ಮತ್ತು ಕೋಲಾಟ ನಡೆಯಲಿದೆ. 16 ರಂದು ನಾಗತಿಹಳ್ಳಿ ಗ್ರಾಮಸ್ಥರಿಂದ ಸಿಡಿ ಕಂಬದ ಸೇವೆ, ರಾತ್ರಿ ಗ್ರಾಮ ದೇವರುಗಳ ಉತ್ಸವ ಜರುಗಲಿದೆ.
17 ರಂದು ಜಾಜೂರು ಗ್ರಾಮದ ಹೊನ್ನಾಲದಮ್ಮ ದೇವಿ, ಅಮ್ಮಯ್ಯಜ್ಜಿ ದೇವಿ ಮತ್ತು ಚಿಕ್ಕಮ್ಮ ದೇವಿಯರ ದೇವಾಲಯಗಳ ಆವರಣದಲ್ಲಿ ಮಧ್ಯಾಹ್ನ ರಥೋತ್ಸವ ಜರುಗಲಿದೆ. ಬಳಿಕ ವೀರಭದ್ರೇಶ್ವರ ಸ್ವಾಮಿ, ಧೂತರಾಯ ಸ್ವಾಮಿ ಮತ್ತು ಹೊಸಪಟ್ಟಣದ ಧೂತರಾಯ ಸ್ವಾಮಿ ದೇವರ ಮಣೇವು ಉತ್ಸವ, ಉಯ್ಯಲೋತ್ಸವ, ಗಂಗಾಸ್ನಾನ, ಪುಣ್ಯಾಹ ನಡೆಯಲಿದೆ. ನಂತರ ಗ್ರಾಮದೊಳಗಿನ ದೇವಾಲಯಕ್ಕೆ ದೇವರುಗಳ ಆಗಮನದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನವಾಗಲಿದೆ.