ನಾಪೋಕ್ಲು: ಸಮೀಪದ ಹೊದವಾಡ ಗ್ರಾಮದ ಶ್ರೀ ಭಗವತಿ ಅಮ್ಮೆರಪ್ಪ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾಪನಾ ಅಷ್ಟಮಂಗಲ ಮಹೋತ್ಸವ ಮೇ 30ರಿಂದ ಜೂ.1ರವರೆಗೆ ಜರುಗಲಿದೆ ಎಂದು ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಚೇಯಡ ಅರುಣ ತಿಳಿಸಿದರು.
ಪ್ರತಿಷ್ಠಾಪನ ಮಹೋತ್ಸವ ಅಂಗವಾಗಿ ಮೇ 30ರಂದು ಸಂಜೆ ದೇವಾಲಯದಲ್ಲಿ ವಾಸ್ತು ಹೋಮ, ವಾಸ್ತು ಬಲಿ ಹಾಗೂ ವಾಸ್ತು ಕಳಸ ಪೂಜೆಗಳು ಜರುಗಲಿವೆ. ಮೇ 31ರಂದು ಬೆಳಗ್ಗೆ ಗಣ ಹೋಮ, ಅನುಜ್ಞಾ ಕಳಸ ಪೂಜೆ, ಅನುಜ್ಞಾ ಕಳಸಾಭಿಷೇಕ, ಜೀವ ಕಳಸ ಹಾಗೂ ಬಿಂಬಶುದ್ಧಿ ಕಳಸ ಪೂಜೆಗಳು ಜರುಗಲಿವೆ. ಮೇ 31ರಂದು ಸಂಜೆ 6.30ಕ್ಕೆ ಆದಿವಾಸ ಹೋಮ ಹಾಗೂ ಮಂಡಲ ಪೂಜೆ ಜರುಗಲಿವೆ. ಜೂನ್ 1ರಂದು ಬೆಳಗ್ಗೆ 6 ಗಂಟೆಗೆ ಗಣ ಹೋಮ , ಬ್ರಹ್ಮ ಕಳಸ ಪೂಜೆ ನಡೆಯಲಿದೆ. ಬೆಳಗ್ಗೆ 7.04 ರಿಂದ 9.16 ರವರೆಗೆ ಬಿಂಬ ಪ್ರತಿಷ್ಠಾಪನೆ ನಡೆಯಲಿದೆ. ಆ ಬಳಿಕ ನಿದ್ರಾ ಕಳಸ ಅಭಿಷೇಕ, ಬ್ರಹ್ಮ ಕಳಸ ಅಭಿಷೇಕ, ಮಹಾಪೂಜೆಗಳು ಜರುಗಲಿವೆ. ಮಧ್ಯಾಹ್ನ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಶ್ರೀ ಭಗವತಿ ಅಮ್ಮೆರಪ್ಪ ದೇವಾಲಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ದೇವಾಲಯವು ಸುಮಾರು 600 ವರ್ಷಗಳ ಇತಿಹಾಸ ಹೊಂದಿದೆ. ದೇವಾಲಯದ ಜೀರ್ಣೋದ್ಧಾರಕ್ಕಾಗಿ ಗ್ರಾಮಸ್ಥರು ಹಾಗೂ ದಾನಿಗಳು ಧನಸಹಾಯ ನೀಡಿದ್ದಾರೆ. ಗಣಪತಿ ಗುಡಿ ಹಾಗೂ ಸುಬ್ರಹ್ಮಣ್ಯ ಗುಡಿಗಳನ್ನು ನಿರ್ಮಿಸಲಾಗಿದೆ. ಕೇರಳದ ಪಾಲೆಘಾಟ್ ನ ಶ್ರೀ ನಾರಾಯಣ ತಂತ್ರಿ ಪೂಜಾ ಕೈಂಕರ್ಯ ನೆರವೇರಿಸುವರು ಎಂದರು.
ದೇವಾಲಯದ ಭಂಡಾರ ತಕ್ಕರಾದ ಚೌರಿರ ಚೋಮಣಿ ಬೋಪಯ್ಯ ಮಾತನಾಡಿ, ಮೂರು ದಿನಗಳ ಕಾಲ ಪ್ರತಿಷ್ಠಾಪನಾ ಅಷ್ಟಮಂಗಲ ಮಹೋತ್ಸವ ನಡೆಸಲು ತೀರ್ಮಾನಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಬೇಕು ಎಂದು ಮನವಿ ಮಾಡಿದರು.
ದೇವತಕ್ಕರಾದ ನಾಟೋಳಂಡ ಗಣಪತಿ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪಲ್ಯಂಡಿ ಎ.ಡಿ., ಊರಿನ ಹಿರಿಯರಾದ ಮಂಡೇಯದ ಬೆಳ್ಳಿಯಪ್ಪ, ಕಿಕ್ಕೇರಿಯಂಡ ನಂಜುಂಡ, ಬಲ್ಲಂಡ ಮುತ್ತಣ್ಣ, ಅಚೇಯಡ ಗಗನ್, ಚೌರಿರ ಪ್ರಕಾಶ್, ಬಲ್ಲಂಡ ಮನು, ಚೌರಿದ ಶರತ್, ಅಯ್ಯಪ್ಪ, ಬಲ್ಲಂಡ ಅಶ್ವತ್ಥ್ , ದಿಲೀಪ್, ಬಿ.ಡಿ.ರಾಜೇಶ್ , ಬಿ.ಡಿ.ದಿನೇಶ್, ಜೀರ್ಣೋದ್ಧಾರ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.