ಅಥಣಿ: ಪಟ್ಟಣದ ಕಾಳಿಕಾದೇವಿ ದೇವಸ್ಥಾನದ ೫೦ನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ ಸಮಾರಂಭ ಜೂ. ೪ರಿಂದ ೮ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ.
ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ವಿಶ್ವಕರ್ಮ ಸಮುದಾಯದ ರಾಜ್ಯ ಕಾರ್ಯದರ್ಶಿ ಭೀಮರಾವ ಬಡಿಗೇರ ಮಾತನಾಡಿ, ಉಡುಪಿ ಕಟಪಾಡಿಯ ಆನೆಗುಂದಿ ಮಹಾಸಂಸ್ಥಾನದ ಜಗದ್ಗುರು ಸರಸ್ವತಿ ಪೀಠಾಧೀಶ್ವರ ಅನಂತ ವಿಭೂಷಿತ ಕಾಳಹಸ್ತೆಂದ್ರ ಸರಸ್ವತಿ ಸ್ವಾಮೀಜಿ ಮತ್ತು ಹಾಸನದ ಅರೇಮಾದೆನಹಳ್ಳಿ ಸುಜ್ಞಾನಪ್ರಭುಪೀಠದ ವಿಶ್ವಬ್ರಾಹ್ಮಣ ಸಂಸ್ಥಾನಮಠದ ಜಗದ್ಗುರು ಅನಂತಶ್ರೀ ವಿಭೂಷಿತ ಶಿವ ಸುಜ್ಞಾನತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದರು.
ಜೂ. ೪ರಂದು ಕಾಳಿಕಾದೇವಿಯ ಪೂಜೆ, ಪಂಚಾಮೃತ ಮಹಾಭಿಷೇಕ, ಮಹಾ ಮಂಗಳಾರತಿ, ಮಂತ್ರ ಪುಷ್ಪ ಜರುಗಲಿದೆ. ನಂತರ ಗಣಪತಿ ಪೂಜೆಯೊಂದಿಗೆ ವಿಶ್ವಕರ್ಮ ಧ್ವಜಾರೋಹಣ ನೆರವೇರಲಿದೆ. ಸಂಜೆ ೪.೩೦ಕ್ಕೆ ಧಾರ್ಮಿಕ ಸಭೆ ಉದ್ಘಾಟನೆಯನ್ನು ನವಲಗುಂದ ಅಜಾತನಾಗಲಿಂಗ ಮಠದ ವೀರೇಂದ್ರ ಸ್ವಾಮೀಜಿ ನೆರವೇರಿಸುವರು. ವಿದ್ಯಾಶಂಕರ ಸ್ವಾಮೀಜಿ, ಸಿದ್ದಯ್ಯ ಸ್ವಾಮೀಜಿ, ವಿಶ್ವನಾಥ ಸ್ವಾಮೀಜಿ, ಶ್ರೀಧರ ಶರ್ಮಾ ಸಾನ್ನಿಧ್ಯ ವಹಿಸುವರು.
ಜೂ. ೫ರಂದು ಬೆಳಗ್ಗೆ ೬ ಗಂಟೆಗೆ ಮಹಾಭಿಷೇಕ ಹಾಗೂ ಅಲಂಕಾರ ಪೂಜೆ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ರುದ್ರಯಾಗ ಹೋಮ ನೆರವೇರಲಿದೆ. ಸಂಜೆ ೫ ಗಂಟೆಗೆ ಧಾರ್ಮಿಕ ಸಭೆ ಮುರನಾಳಮಠದ ಜಗನ್ನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಜೂ. ೬ರಂದು ಕಾಳಿಕಾದೇವಿಯ ಉತ್ಸವಮೂರ್ತಿಯ ಸಿಂಗರಿಸಿದ ಬೆಳ್ಳಿ ಪಲ್ಲಕ್ಕಿ ಉತ್ಸವ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಕಲ ವಾದ್ಯಗಳೊಂದಿಗೆ ಸಾಗಲಿದೆ. ಧಾರ್ಮಿಕ ಸಭೆ ಸಾನ್ನಿಧ್ಯ ಶಹಾಪುರದ ಕಾಳಹಸ್ತೇಂದ್ರ ಸ್ವಾಮೀಜಿ ವಹಿಸುವರು.
ಜೂ. ೭ರಂದು ಬೆಳಗ್ಗೆ ೬ ಗಂಟೆಗೆ ಶತಚಂಡಿಕಾಯಾಗ ಪೂರ್ಣಾಹುತಿ ಅಷ್ಟಾವಧಾನ ಸೇವೆ ನಂತರ ನೂತನ ರಥೋತ್ಸವ ಪ್ರಮುಖ ಬೀದಿಗಳಲ್ಲಿ ಸಾಗಲಿದೆ.
ಜೂ. ೮ರಂದು ಬೆಳಗ್ಗೆ ೧೧ಗಂಟೆಗೆ ಧಾರ್ಮಿಕ ಸಭೆ ಜರುಗಲಿದ್ದು, ಗಚ್ಚಿನಮಠದ ಶಿವಬಸವ ಸ್ವಾಮೀಜಿ, ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ, ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಚನ್ನಪ್ಪ ಬಡಿಗೇರ ಅಧ್ಯಕ್ಷತೆ ವಹಿಸುವರು. ಶಾಸಕ ಲಕ್ಷ್ಮಣ ಸವದಿ, ಮಾಜಿ ಶಾಸಕ ಮಹೇಶ ಕುಮಠಳ್ಳಿ, ತಹಸೀಲ್ದಾರ್ ಸಿದರಾಯ ಭೋಸಗಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು
ವಿಶ್ವಕರ್ಮ ಸಮುದಾಯದ ತಾಲೂಕಾಧ್ಯಕ್ಷ ಚನ್ನಪ್ಪ ಬಡಿಗೇರ, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಭರಮಣ್ಣ ಬಡಿಗೇರ, ಉತ್ಸವ ಸಮಿತಿ ಅಧ್ಯಕ್ಷ ಉಮೇಶ ಪತ್ತಾರ, ಉಪಾಧ್ಯಕ್ಷ ಸಂಜು ಬಡಿಗೇರ, ಚಂದ್ರಶೇಖರ ಬಡಿಗೇರ, ಸುರೇಶ ಬಡಿಗೇರ, ಶಂಕರ ಮಿರಜಕರ, ರಮೇಶ ಬಡಿಗೇರ, ಕಾರ್ತಿಕ ಮಿರಜಕರ ಇತರರಿದ್ದರು.