ಜಿಲ್ಲೆ

ನಾಳೆಯಿಂದ ನಿತ್ಯ ಪ್ರವಚನ ಮಾಲೆ

ದಾವಣಗೆರೆ: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ವಿದ್ಯಾನಗರದ ವಿವಿ ಆವರಣದಲ್ಲಿ ಡಿ.4 ರಿಂದ 30 ರವರೆಗೆ ಶರಣರು ಕಂಡ ಶಿವ ಪ್ರವಚನ ಮಾಲೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಗೀತಾ ತಿಳಿಸಿದರು.

ಸೋಮವಾರ ಸಂಜೆ 6 ಗಂಟೆಗೆ ಜಡೇಸಿದ್ದ ಶಿವಯೋಗೀಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಪ್ರವಚನ ಮಾಲಿಕೆಯ ಉದ್ಘಾಟನಾ ಸಮಾರಂಭ ನಡೆಯಲಿದೆ. ಈಶ್ವರೀಯ ವಿವಿ ದಾವಣಗೆರೆ ಪ್ರಧಾನ ಕೇಂದ್ರದ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾ ಅಧ್ಯಕ್ಷತೆ ವಹಿಸುವರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್, ಉಪವಿಭಾಗಾಧಿಕಾರಿ ಎನ್.ದುರ್ಗಾಶ್ರೀ, ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್ ಗೌರವ ಕಾರ್ಯದರ್ಶಿ ಎಂ.ಬಿ.ಸಂಗಮೇಶ್ವರಗೌಡ್ರು, ಭೂ ದಾನಿ ಲಕ್ಷ್ಮ್ಮಮ್ಮ ದ್ಯಾಮಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಹೇಳಿದರು. ನಿತ್ಯ ಸಂಜೆ 6.30 ರಿಂದ ಒಂದು ಗಂಟೆ ಕಾಲ ಪ್ರವಚನ ನಡೆಯಲಿದ್ದು, ಸಾರ್ವಜನಿಕರು ಭಾಗವಹಿಸಿ ಪರಮಾತ್ಮನ ಸಂದೇಶವನ್ನು ಅರಿತು ಸನ್ಮಾರ್ಗದಲ್ಲಿ ನಡೆಯಬೇಕು ಎಂದರು. ಸಂಸ್ಥೆಯು ವಿಶ್ವದ 140 ರಾಷ್ಟ್ರಗಳಲ್ಲಿ ಸೇವಾ ಕೇಂದ್ರಗಳನ್ನು ಹೊಂದಿದ್ದು, ಅಲ್ಲೆಲ್ಲ ಏಕಕಾಲಕ್ಕೆ ಪ್ರವಚನ ನಡೆಯಲಿದೆ ಎಂದರು. ಗೋಷ್ಠಿಯಲ್ಲಿ ಮಂಜುನಾಥ್ ಏಕಬೋಟೆ, ಬಿ.ಕೆ.ರಾಜಶೇಖರ್, ಎಚ್.ಎಂ.ಶಂಕರಯ್ಯ. ಯಶೋದಾ, ಸವಿತಾ, ಭೀಷ್ಮಣ್ಣ ಇದ್ದರು.