ಜಿಲ್ಲೆ

ನಾಳೆಯಿಂದ ಕಲ್ಲಳ್ಳಿ ಮಠದ ಶ್ರೀಗುರು ಪಟ್ಟಾಧಿಕಾರ ಮಹೋತ್ಸವ

ಶನಿವಾರಸಂತೆ: ಕೊಡ್ಲಿಪೇಟೆ ಶ್ರೀ ಗುರುಪೀಠ ಕಲ್ಲಳ್ಳಿಮಠದ ಶ್ರೀ ಗುರು ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮವು ಫೆ.9 ಮತ್ತು 10ರಂದು ಆಯೋಜಿಸಲಾಗಿದೆ ಎಂದು ಕೊಡ್ಲಿಪೇಟೆ ಶ್ರೀ ಗುರು ಪೀಠ ಕಲ್ಲಳ್ಳಿಮಠ ಹಾಗೂ ಕೊಡ್ಲಿಪೇಟೆ ವೀರಶೈವ ಮಂಡಳಿ ಅಧ್ಯಕ್ಷ ಎಸ್.ಎಸ್.ವರಪ್ರಸಾದ್ ತಿಳಿಸಿದರು.


ಕೊಡ್ಲಿಪೇಟೆ ಶ್ರೀ ಗುರುಪೀಠ ಕಲ್ಲಳ್ಳಿಮಠಧೀಶರಾದ ಶ್ರೀ ರುದ್ರಮುನಿ ಸ್ವಾಮಿಗಳಿಗೆ ಶ್ರೀ ಗುರು ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಫೆ.9 ರಂದು ಶ್ರೀ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಯಲಿದ್ದು, ಫೆ.10 ರಂದು ಬೆಳಗ್ಗೆ 11 ಗಂಟೆಗೆ ಶ್ರೀ ಕ್ಷೇತ್ರ ಕಲ್ಲಳ್ಳಿಮಠದ ಆವರಣದಲ್ಲಿರುವ ಶ್ರೀ ವೀರಭದ್ರ ಸ್ವಾಮೀಗಳ ವೇದಿಕೆಯಲ್ಲಿ ಶ್ರೀ ಗುರುಪಟ್ಟಾಧಿಕಾರ ಮಹೋತ್ಸವ ಮತ್ತು ಧರ್ಮಸಭಾ ಕಾರ್ಯಕ್ರಮ ನಡೆಯುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆ ಶ್ರೀ ಕಾಡುಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಮಠಧೀಶರು, ಸ್ವಾಮೀಜಿಗಳು ಪಾಲ್ಗೊಳ್ಳುವರು. ಈ ಸಂದರ್ಭದಲ್ಲಿ ಗಣ್ಯರು ಭಾಗವಹಿಸುತ್ತಾರೆ ಎಂದ ಅವರು, ಶ್ರೀ ಗುರುಪಟ್ಟಾಧಿಕಾರ ಮಹೋತ್ಸವದಲ್ಲಿ ಜಿಲ್ಲೆ ಹಾಗೂ ಪಕ್ಕದ ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು ತಾಲೂಕಿನ ವೀರಶೈವ ಸಮಾಜದ ಬಾಂಧವರು ಸೇರಿದಂತೆ ಶ್ರೀ ಕ್ಷೇತ್ರ ಕಲ್ಲಳ್ಳಿಮಠದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಟ್ಟಾಧಿಕಾರ ಮಹೋತ್ಸವವನ್ನು ಯಶಸ್ವಿಗೊಳಿಸುವಂತೆ ಎಸ್.ಎಸ್.ವರಪ್ರಸಾದ್ ಮನವಿ ಮಾಡಿದರು.


ಆಡಳಿತ ಮಂಡಳಿ ಉಪಾಧ್ಯಕ್ಷ ಎಚ್.ಸಿ.ಯತೀಶ್‌ಕುಮಾರ್ ಮಾತನಾಡಿ, ಫೆ.9 ಮತ್ತು 10ರಂದು ಆಯೋಜಿಸಿರುವ ಶ್ರೀ ಗುರುಪೀಠ ಕಲ್ಲಳ್ಳಿಮಠದ ಶ್ರೀ ಗುರು ಪಟ್ಟಾಧಿಕಾರ ಮಹೋತ್ಸವಕ್ಕೆ ಜಿಲ್ಲೆ, ಹೊರ ಜಿಲ್ಲೆಯಿಂದ 2 ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾ ದಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.ಶ್ರೀ ಗುರುಪೀಠ ಕಲ್ಲಳ್ಳಿ ಮಠಧೀಶ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿದರು. ಆಡಳಿತ ಮಂಡಳಿ ಕಾರ್ಯದರ್ಶಿ ಪಿ.ಎಸ್.ಲಿಂಗರಾಜ್ ಇದ್ದರು.