ಸಾಗರ: ಸಿಗಂದೂರು ಚೌಡೇಶ್ವರಿ ದೇವಾಲಯದ ಬಾಗಿಲು ತೆರೆದಿಲ್ಲ. ಆದರೆ ಕೊಲ್ಲೂರಿಗೆ ಹೋಗುವ ಭಕ್ತರ ಸಂಖ್ಯೆ ಹೆಚ್ಚಾಗಿರುವುದರಿಂದ ಬುಧವಾರದಿಂದ ಎರಡು ಲಾಂಚ್ ಬಿಡುವ ವ್ಯವಸ್ಥೆ ಮಾಡಲಾಗಿದೆ.
ಕರೊನಾ ಹಿನ್ನೆಲೆಯಲ್ಲಿ ಒಂದು ಲಾಂಚ್ ತಾಸಿಗೊಮ್ಮೆ ಬಿಡಲಾಗಿತ್ತು. ಪ್ರಯಾಣಿಕರ ಜತೆಗೆ 30ರಿಂದ 40 ವಾಹನಗಳು ತುಂಬಿಕೊಳ್ಳುತ್ತಿದ್ದವು. ಸ್ಥಳೀಯರ ಪ್ರಯಾಣಕ್ಕೆ ಅವಕಾಶವಾಗದೆ ವಾಗ್ವಾದ ನಡೆಯುತ್ತಿತ್ತು.
ಶಾಸಕ ಹರತಾಳು ಹಾಲಪ್ಪ ಮಂಗಳವಾರ ಸಿಗಂದೂರಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ಆಲಿಸಿದರು. ಇಲಾಖೆ ಮುಖ್ಯಸ್ಥರೊಂದಿಗೆ ಮಾತನಾಡಿ, ಬುಧವಾರದಿಂದ ಎರಡು ಲಾಂಚ್ಗಳು ಗಂಟೆಗೆ ಎರಡು ಬಾರಿ ಸಂಚರಿಸುವ ವ್ಯವಸ್ಥೆ ಮಾಡಿದ್ದಾರೆ.
ಪ್ರವಾಸಿಗರ ಸಂಖ್ಯೆ ಹೆಚ್ಚಳ: ಕೊಲ್ಲೂರಿಗೆ ಹೋಗುವ ಭಕ್ತರು ಕೈಮುಗಿಯಲು ಸಿಗಂದೂರೇಶ್ವರಿ ದೇವಾಲಯದ ಎದುರು ನಿಲ್ಲುವುದರಿಂದ ಜನಸಂದಣಿ ಉಂಟಾಗುತ್ತಿದೆ. ಅಲ್ಲದೆ ಲಾಂಚ್ ಸಿಬ್ಬಂದಿಗೆ ಸ್ಯಾನಿಟೈಸರ್, ಕೈಗವಸು, ಮಾಸ್ಕ್ ಸೌಲಭ್ಯ ಕಲ್ಪಿಸಿಲ್ಲ. ಹಾಗೆಯೇ ಪ್ರವಾಸಿಗರನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ಅವಶ್ಯವಿದೆ.
ದೇವಾಲಯ ತೆರೆಯುವವರೆಗೆ ಮತ್ತು ಬಸ್ ವ್ಯವಸ್ಥೆ ಸರಿ ಆಗುವವರೆಗೆ ಪ್ರವಾಸಿಗರು ಇಲ್ಲಿಗೆ ಬಾರದಂತೆ ನಿರ್ಬಂಧಿಸಬೇಕು. ಪ್ರವಾಸಿಗರು ಹೆಚ್ಚಾದರೆ ಕರೊನಾ ಹರಡುವ ಭೀತಿ ಇದೆ. ಈಗಾಗಲೇ ಶರಾವತಿ ಹಿನ್ನೀರು ಪ್ರದೇಶದಲ್ಲಿ ಒಂದು ಪ್ರಕರಣ ಪತ್ತೆ ಆಗಿರುವುದರಿಂದ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ.