ಜಿಲ್ಲೆ

ನಾಳೆಯಿಂದ ಅಭಿಮನ್ಯು ಸಾರಥ್ಯದಲ್ಲಿ ಕಾಡಾನೆಗಳ ಸೆರೆ ಆಪರೇಷನ್

ಹಾಸನ: ಕಾಡಾನೆಗಳ ಸೆರೆ ಹಿಡಿಯುವ ಸಂದರ್ಭದಲ್ಲಿ ಅರ್ಜುನ ಮೃತಪಟ್ಟ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು ಮತ್ತೆ ಜಿಲ್ಲೆಯ ವಿವಿಧೆಡೆ ಉಪಟಳ ನೀಡುತ್ತಿರುವ ಪುಂಡಾನೆ ಸೆರೆ ಕಾರ್ಯಾಚರಣೆ ನಾಳೆಯಿಂದ ಆರಂಭಗೊಳ್ಳಲಿದೆ.
ದುಬಾರೆ ಹಾಗೂ ಮತ್ತಿಗೋಡು ಶಿಬಿರದಿಂದ ಎಂಟು ಸಾಕಾನೆಗಳು ಈಗಾಗಲೇ ಆಗಮಿಸಿದ್ದು, ಬೇಲೂರು ತಾಲೂಕು ಬಿಕ್ಕೋಡು ಬಳಿಯ ಕ್ಯಾಂಪ್‌ನಲ್ಲಿ ಬೀಡು ಬಿಟ್ಟಿವೆ. ಈ ಬಾರಿ ನುರಿತ ತಂಡದೊಂದಿಗೆ ಕಾರ್ಯಾಚರಣೆ ನಡೆಯಲಿದ್ದು, ಎಲ್ಲಾ ಸಿದ್ಧತೆ ಕೈಗೊಳ್ಳಲಾಗಿದೆ. ಮೈಸೂರು ಅಂಬಾರಿ ಹೊತ್ತಿದ್ದ ಅಭಿಮನ್ಯು ಸಹ ಕಾಡಾನೆಗಳ ಹಂಟಿಂಗ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದೆ.
ಈಗಾಗಲೇ ಸೆರೆ ಹಿಡಿಯುವ ಸಲಗಗಳನ್ನು ಗುರುತಿಸಲಾಗಿದ್ದು ಇಂದಿನಿಂದ ಸತತ ಒಂದು ತಿಂಗಳ ಕಾಲ ಕಾರ್ಯಾಚರಣೆ ನಡೆಯಲಿದೆ.ಈ ಹಿಂದೆ ನ.24 ರಿಂದ ಕ್ಯಾಪ್ಟನ್ ಅರ್ಜುನನ ನೇತೃತ್ವದಲ್ಲಿ ಆರು ಸಾಕಾನೆಗೊಳಂದಿಗೆ ಆನೆ ಸೆರೆ ಕಾರ್ಯಾಚರಣೆ ನಡೆದಿತ್ತು. 2 ಹೆಣ್ಣಾನೆಗಳಿಗೆ ರೇಡಿಯೋ ಕಾಲರ್ ಹಾಗೂ 3 ಪುಂಡಾನೆ ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸಿ ಬೇರೆಡೆಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ ಡಿ.4 ರಂದು ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮದಗಜದೊಂದಿಗೆ ಕಾದಾಟ ವೇಳೆ ಅರ್ಜುನ ವೀರಮರಣ ಹೊಂದಿದ್ದ. ಅಂದಿನಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಆರಂಭವಾಗುತ್ತಿದೆ.
ಇದಕ್ಕಾಗಿ ಅಭಿಮನ್ಯು, ಪ್ರಶಾಂತ, ಸುಗ್ರೀವ, ಅಶ್ವತ್ಥಾಮ, ಕರ್ನಾಟಕ ಭೀಮ, ಹರ್ಷ, ಮಹೇಂದ್ರ, ಧನಂಜಯ ಸೇರಿ ಎಂಟು ಸಾಕಾನೆಗಳು ಆಗಮಿಸುವೆ. ಇಂದು ಸ್ಥಳೀಯ ಶಾಸಕ ಎಚ್.ಕೆ.ಸುರೇಶ್ ಹಾಗೂ ಅರಣ್ಯ ಅಧಿಕಾರಿಗಳು ಪೂಜೆ ಸಲ್ಲಿಸಿ ಕಬ್ಬು, ಬೆಲ್ಲ ನೀಡಿ ಆಪರೇಷನ್ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಬೇಲೂರು ಭಾಗದಲ್ಲಿ ಸುಮಾರು 40 ಕಾಡಾನೆಗಳ ಹಿಂಡಿದ್ದು, ಕಳೆದ ವಾರ ಮತ್ತಾವರ ಗ್ರಾಮದಲ್ಲಿ ಕಾಡಾನೆ ದಾಳಿಗೆ ವಸಂತ ಎಂಬ ತೋಟದ ಕಾರ್ಮಿಕ ಬಲಿಯಾಗಿದ್ದರು. ನಂತರ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಬೇಲೂರು ಭಾಗದಿಂದಲೇ ನರಹಂತಕ ಆನೆ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭವಾಗಲಿದ್ದು, ಜನರಿಗೆ ಆಗುವ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಸುರೇಶ್ ಹೇಳಿದರು.
ಕಳೆದ ಸಲದ ಅನಾಹುತದಿಂದ ಎಚ್ಚೆತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಈ ಬಾರಿ ನುರಿತ ಅರವಳಿಕೆ ವೈದ್ಯರು ಹಾಗೂ ತಂಡದೊಂದಿಗೆ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಭಾಗಿಯಾಗುವ ತಂಡದ ಜೊತೆ ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳು ಸಮಾಲೋಚನೆ ನಡೆಸಿ ಅಗತ್ಯ ಸಲಹೆ ಹಾಗೂ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸುವಂತೆ ಸೂಚನೆ ನೀಡಿದರು. ಮೊದಲು 3 ಸಲಗಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲಾಗುವುದು. ನಂತರ ಹೆಚ್ಚು ಉಪಟಳ ನೀಡುತ್ತಿರುವ ಕಾಡಾನೆಗಳ ಜೊತೆಗೆ ಅರ್ಜುನನ ಸಾವಿಗೆ ಕಾರಣವಾದ ನರಹಂತಕ ಆನೆಯನ್ನೂ ಸೆರೆ ಹಿಡಿದು ಸ್ಥಳಾಂತರ ಮಾಡಲಾಗುವುದು. ಎಂದು ಸಿಸಿಎಫ್ ರವಿಶಂಕರ್ ತಿಳಿಸಿದ್ದಾರೆ.
ಈ ಸಂಬಂಧ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್ ಅವರ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳ ಸಭೆ ನಡೆದಿದ್ದು, ಕಾರ್ಯಾಚರಣೆಯ ರೂಪು-ರೇಷೆ, ಎಲ್ಲೆಲ್ಲಿ ಕಾರ್ಯಾಚರಣೆ ನಡೆಸಬೇಕು, ಯಾವ ಭಾಗದಲ್ಲಿ ಎಷ್ಟು ಪುಂಡಾನೆಗಳಿವೆ, ಇಟಿಎಫ್ ಸಿಬ್ಬಂದಿ ಯಾವೆಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಚರ್ಚಿಸಿಸಲಾಗಿದೆ.

ಕಾರ್ಯಾಚರಣೆ ಪುನಾರಂಭ:

ಈ ಹಿಂದೆ ನ.23 ರಿಂದ ಮಲೆನಾಡು ಭಾಗದಲ್ಲಿ ಉಪಟಳ ನೀಡುತ್ತಿರುವ ಪುಂಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡುವುದು ಹಾಗು ಬೆಳೆನಾಶ, ಆಸ್ತಿಪಾಸ್ತಿ ನಷ್ಟ ಉಂಟು ಮಾಡುವ ಆನೆಗಳ ಚಲನ-ವಲನ ತಿಳಿಯಲು ಅವುಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆ ಆರಂಭವಾಗಿತ್ತು. ಇದರ ನೇತೃತ್ವವನ್ನು ಮೈಸೂರು ದಸರಾ ಅಂಬಾರಿ ಹೊರುವ ಆನೆ ಅರ್ಜುನ ನೇತೃತ್ವ ವಹಿಸಿತ್ತು. ಕಾರ್ಯಾಚರಣೆ ನಡೆಸುವ ವೇಳೆ ಡಿ.4 ರಂದು ಸಕಲೇಶಪುರ ಯಸಳೂರು ಅರಣ್ಯ ವ್ಯಾಪ್ತಿಯ ದಬ್ಬಳ್ಳಿಕಟ್ಟೆ ಅರಣ್ಯ ವಲಯದಲ್ಲಿ ಕಾಡಾನೆಯೊಂದಿಗಿನ ಕಾಳಗದಲ್ಲಿ ಅರ್ಜುನ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿತ್ತು. ಹೀಗಾಗಿ ಕಾರ್ಯಾಚರಣೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿಸಲಾಗಿತ್ತು. ವಾರದ ಹಿಂದೆಯಷ್ಟೇ ಬೇಲೂರು ತಾಲ್ಲೂಕಿನ ಮತ್ತಾವರ ಗ್ರಾಮದಲ್ಲಿ ಕೂಲಿ ಕಾರ್ಮಿಕ ವಸಂತ ಎಂಬುವರ ಮೇಲೆ ಕಾಡಾನೆ ದಾಳಿ ನಡೆಸಿ ಕೊಂದು ಹಾಕಿತ್ತು. ಇದರ ಬೆನ್ನಲ್ಲೇ ಮೂರು ದಿನಗಳ ಹಿಂದೆ ಗುಮ್ಮನಹಳ್ಳಿ ಗ್ರಾಮದಲ್ಲಿ ಮೇನಕಾ ಎಂಬ ಮಹಿಳೆ ಮೇಲೆ ಪುಂಡಾನೆ ದಾಳಿ ನಡೆಸಿ ಗಂಭೀರವಾಗಿ ಗಾಳಗೊಳಿಸಿತ್ತು. ಇದರಿಂದ ಸಾರ್ವಜನಿಕರ ಆಕ್ರೋಶ ತೀವ್ರಗೊಂಡಿದ್ದರಿಂದ ಪುನಃ ಕಾರ್ಯಾಚರಣೆ ಆರಂಭಿಸುವುದಾಗಿ ಅರಣ್ಯ ಸಚಿವರು ಭರವಸೆ ನೀಡಿದ್ದರು. ಅದರಂತೆ ಕಾರ್ಯಾಚರಣೆಗೆ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ.

ಪೂರ್ವ ತಯಾರಿಗೆ ಕಸರತ್ತು:
ಈ ಹಿಂದೆ ಗಾಯಗೊಂಡಿದ್ದ ಕಾಡಾನೆ ಭೀಮನನ್ನು ಸೆರೆ ಹಿಡಿದು ಚಿಕಿತ್ಸೆ ನೀಡಲು ಕಾರ್ಯಾಚರಣೆ ನಡೆಸಿದ ವೇಳೆ ಭೀಮನ ದಾಳಿಗೆ ತುತ್ತಾಗಿ ಶಾರ್ಫ್ಶೂಟರ್ ವೆಂಕಟೇಶ್ ಅವರು ಮೃತಪಟ್ಟಿದ್ದರು. ಇತ್ತೀಚೆಗೆ ಪುಂಡಾನೆ ಸೆರೆ ವೇಳೆ ಅರ್ಜುನ ಸಾವನ್ನಪ್ಪಿರುವ ನಿದರ್ಶನಗಳು ಅರಣ್ಯ ಅಧಿಕಾರಿಗಳ ಕಣ್ಮುಂದೆ ಇರುವುದರಿಂದ ಸಾಕಷ್ಟು ಪೂರ್ವ ಸಿದ್ಧತೆಯೊಂದಿಗೆ ಎಚ್ಚರಿಕೆ ಹೆಜ್ಜೆ ಇಡಲು ಮುಂದಾಗಿದ್ದಾರೆ. ಹೀಗಾಗಿಯೇ ಕಳೆದ ಎರಡು ದಿನಗಳಿಂದ ಹೊಸ ಉಪ ಅರಣ್ಯ ಸಂಕ್ಷಣಾಧಿಕಾರಿ ಸೌರಭ್ ಕುಮಾರ್ ಅವರು ಸಭೆಗಳ ಮೇಲೆ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.