ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿ ಯಾತ್ರೆಗೆ ದಿನಾಂಕ ನಿಗದಿಯಾಗಿದ್ದು, ಸಚಿವ ಸಂಪುಟ ವಿಸ್ತರಣೆಗೂ ಮುಹೂರ್ತ ಕೂಡಿಬಂದಂತೆ ಕಾಣುತ್ತಿದೆ. ಜ.30ರಂದು ದೆಹಲಿಗೆ ಪ್ರಯಾಣ ಬೆಳೆಸಲಿರುವ ಸಿಎಂ, ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರನ್ನು ಭೇಟಿ ಮಾಡಿ ಅಭಿನಂದಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಂಪುಟ ಬಗ್ಗೆ ಚರ್ಚೆ ನಡೆಸಿ ಪಟ್ಟಿಯನ್ನು ಅಂತಿಮಗೊಳಿಸಿಕೊಳ್ಳಲಿದ್ದು, ಅದೇ ದಿನ ಸಂಪುಟ ವಿಸ್ತರಣೆ ಯಾವಾಗ ಎನ್ನುವ ಬಗ್ಗೆ ಖಚಿತ ಮಾಹಿತಿ ಸಿಗಲಿದೆ.
ಪಕ್ಷದ ವರಿಷ್ಠರು ಒಪ್ಪಿದರೆ, ಸಿಎಂ ಅಂದುಕೊಂಡಿರುವಂತೆ ಜ.31ರಂದು ಸಂಪುಟ ವಿಸ್ತರಣೆ ನಡೆಯಲಿದೆ. ಈ ಕುರಿತು ರಾಜಭವನಕ್ಕೂ ಸೂಕ್ಷ್ಮವಾಗಿ ಮಾಹಿತಿ ನೀಡಲಾಗಿದ್ದು, ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ದಾವೋಸ್ನಿಂದ ಬಂದ ಮೂರ್ನಾಲ್ಕು ದಿನಗಳಲ್ಲಿ ಸಂಪುಟ ವಿಸ್ತರಣೆ ಎಂದು ಹೇಳಿಕೆ ನೀಡಿದ್ದರಾದರೂ ವರಿಷ್ಠರ ನಡೆ ನಿಗೂಢವಾಗಿದೆ.
11 ಶಾಸಕರ ಪರ ಬ್ಯಾಟಿಂಗ್: ಮೊದಲ ಹಂತದಲ್ಲಿ 11 ಅರ್ಹ ಶಾಸಕರಿಗೆ ಅವಕಾಶ ನೀಡಿ ಮಾತು ಉಳಿಸಿಕೊಳ್ಳೋಣ ಎಂಬ ಬಿಎಸ್ವೈ ನಿಲುವು ವರಿಷ್ಠರಿಗೆ ತಲೆನೋವಾಗಿದೆ. 11 ಶಾಸಕರೂ ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿರುವುದು ಸಿಎಂಗೂ ಸಮಸ್ಯೆ ತಂದೊಡ್ಡಿದೆ. ಆ ಕಾರಣಕ್ಕೆ ಮೊದಲು ಅವರಿಗೆ ಅವಕಾಶ ಕೊಟ್ಟು, ಒಂದೂವರೆ ವರ್ಷದ ಬಳಿಕ ಕೆಲ ಸಚಿವರನ್ನು ಕೈ ಬಿಟ್ಟು ಇನ್ನುಳಿದವರಿಗೆ ಅವಕಾಶ ಕೊಡಬಹುದು ಎನ್ನುವುದು ಸಿಎಂ ಲೆಕ್ಕಾಚಾರ.
ಸಂತೋಷ್ ರಿಮೋಟ್ ಕಂಟ್ರೋಲ್: ಸಿಎಂ ಭೇಟಿ ಮಾಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್, ಸಚಿವರ ಪಟ್ಟಿಯನ್ನು ಕಳುಹಿಸಿಕೊಡಿ ಎಂದಿದ್ದರು. ಅದರಂತೆ ಸಿಎಂ ಪಟ್ಟಿಯನ್ನು ರವಾನಿಸಿದ್ದು, ಅದರಲ್ಲಿ ಅರವಿಂದ ಲಿಂಬಾವಳಿ ಮತ್ತು ಉಮೇಶ್ ಕತ್ತಿ ಅವರ ಹೆಸರುಗಳು ಸೇರಿಕೊಂಡಿವೆ.
ಈ ಪಟ್ಟಿಗೆ ತಮ್ಮ ಪಟ್ಟಿಯನ್ನು ಸಮ್ಮಿಲಗೊಳಿಸಿ ಅಂತಿಮ ಪಟ್ಟಿ ತಯಾರು ಮಾಡಿ ಕಳಿಸಲು ಸಂತೋಷ್ ಪ್ರಯತ್ನ ನಡೆಸಿದ್ದಾರೆ. ಆ ಕಾರಣಕ್ಕಾಗಿಯೇ ಸಂಪುಟ ವಿಸ್ತರಣೆ ತಡವಾಗಲು ತಡವಾಗುತ್ತಿದೆ ಎನ್ನುವ ವಾದವೂ ಇದೆ. ಸಂತೋಷ್ ಮತ್ತು ನಡ್ಡಾ ಒಪು್ಪವ ಪಟ್ಟಿಗೆ ಅಮಿತ್ಷಾ ಅಸ್ತು ಎನ್ನುವ ಸಂಭವ ಇದೆ.
ಬಿಎಸ್ವೈಗೆ ಪೂರ್ಣಾವಧಿ ಅವಕಾಶ ಕೊಡಿ
ಬೆಂಗಳೂರು: ಪೂರ್ಣಾವಧಿ ಅಧಿಕಾರ ಪೂರೈಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪಕ್ಷದವರು ಅವಕಾಶ ಕೊಡಬೇಕು. ಹೊಸ ಶಾಸಕರು ಅವಸರದ ತೀರ್ಮಾನ ತೆಗೆದುಕೊಳ್ಳದೆ ಸಹಕರಿಸಬೇಕು ಎಂದು ನಿಡುಮಾಮಿಡಿ ಮಠದ ಚನ್ನಮಲ್ಲ ವೀರಭದ್ರ ಸ್ವಾಮೀಜಿ ಮಂಗಳವಾರ ಸಲಹೆ ನೀಡಿದರು.
ಶ್ರೀಜಚನಿ ಅಧ್ಯಯನ ಪೀಠ ಮತ್ತು ಸಂಶೋಧನಾ ಸಂಸ್ಥೆಯ ನೂತನ ಕಟ್ಟಡ ಉದ್ಘಾಟನೆಗೆ ಆಗಮಿಸಿದ್ದ ಸಿಎಂ ಯಡಿಯೂರಪ್ಪ, ಸಚಿವರಾದ ಆರ್.ಅಶೋಕ ಹಾಗೂ ವಿ.ಸೋಮಣ್ಣ ಸಮಕ್ಷಮವೇ ನಿಡುಮಾಮಿಡಿ ಶ್ರೀ ಈ ಉಪದೇಶ ನೀಡಿದರು. ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳುವರು.
ಲಿಂಗಾಯತ ಸಮುದಾಯದ ಅನೇಕ ಮುಖ್ಯಮಂತ್ರಿಗಳನ್ನು ನಾಡು ಕಂಡಿದೆ. ಆದರೆ, ವೀರಶೈವ ಸಮುದಾಯ ಯಡಿಯೂರಪ್ಪನವರನ್ನು ನಾಯಕ ಎಂದು ಗುರುತಿಸಿದೆ. ಎಸ್.ಎಂ.ಕೃಷ್ಣ ನಂತರ ಯಡಿಯೂರಪ್ಪ ಸಾಕಷ್ಟು ಸವಾಲು, ಸಂಕಷ್ಟಗಳನ್ನು ಅನುಭವಿಸುತ್ತಿದ್ದು, ಎಲ್ಲ ಸವಾಲುಗಳನ್ನು ಎದುರಿಸಿ ಆಡಳಿತ ನಡೆಸುತ್ತಿದ್ದಾರೆ. ಮಠಗಳಿಗೆ ಸಹಾಯ ಮಾಡುವ ಪರಂಪರೆ ತಂದವರು ಯಡಿಯೂರಪ್ಪ. ಅದನ್ನು ಮುಂದುವರಿಸುತ್ತಾರೆ ಎಂದು ನಿಡುಮಾಮಿಡಿ ಸ್ವಾಮೀಜಿ ಹಾಡಿ ಹೊಗಳಿದರು.
12 ಜಿಲ್ಲಾ ಅಧ್ಯಕ್ಷರ ನೇಮಕ
ಭಾರತೀಯ ಜನತಾ ಪಕ್ಷದ ರಾಜ್ಯ ಘಟಕವು ಮೈಸೂರು, ಬೆಂಗಳೂರು ಸೇರಿ 12 ಸಂಘಟನಾತ್ಮಕ ಜಿಲ್ಲೆಗಳಿಗೆ ಜಿಲ್ಲಾ ಅಧ್ಯಕ್ಷರನ್ನು ನೇಮಿಸಿದೆ. ಮೈಸೂರು ನಗರ- ಶ್ರೀವತ್ಸ, ಮೈಸೂರು ಗ್ರಾಮೀಣ- ಎಸ್.ಡಿ.ಮಹೇಂದ್ರ, ಚಾಮರಾಜನಗರ- ಆರ್.ಸುಂದರ್, ಉಡುಪಿ- ಕುಯ್ಲಾಡಿ ಸುರೇಶ್ ನಾಯಕ್, ಉತ್ತರ ಕನ್ನಡ- ವೆಂಕಟೇಶ್ ನಾಯಕ್, ಬಾಗಲಕೋಟೆ- ಶಾಂತಪ್ಪಗೌಡ ತೀರ್ಥಪ್ಪಗೌಡ ಪಾಟೀಲ್, ರಾಯಚೂರು- ರಮಾನಂದ ಯಾದವ್, ಬಳ್ಳಾರಿ- ಚನ್ನಬಸವನಗೌಡ ಪಾಟೀಲ್, ದಾವಣಗೆರೆ- ವೀರೇಶ ಹನಗವಾಡಿ, ಬೆಂಗಳೂರು ಗ್ರಾಮಾಂತರ- ಎ.ವಿ.ನಾರಾಯಣಸ್ವಾಮಿ, ಬೆಂಗಳೂರು ಕೇಂದ್ರ- ಜಿ.ಮಂಜುನಾಥ್ ಮತ್ತು ಬೆಂಗಳೂರು ದಕ್ಷಿಣ- ಎನ್.ಆರ್.ರಮೇಶ್ ಆಯ್ಕೆಯಾಗಿದ್ದಾರೆ.
ವಿರೋಧ ಪಕ್ಷದ ನಾಯಕರಿಗೆ ಸಂಪುಟ ವಿಸ್ತರಣೆ ವಿಚಾರ ಯಾಕೆ ಬೇಕು? ಸಂಪುಟ ವಿಸ್ತರಣೆ ಮಾಡುವುದು ಸಿಎಂ ಪರಮಾಧಿಕಾರ. ಯಾವಾಗ, ಯಾರನ್ನು ಸಚಿವರನ್ನಾಗಿ ಮಾಡಬೇಕೆಂದು ಅವರೇ ನಿರ್ಧರಿಸುತ್ತಾರೆ. | ಜಗದೀಶ ಶೆಟ್ಟರ್ ಸಚಿವ ಸಚಿವ ಸಂಪುಟ ಬರುವ ಶುಕ್ರವಾರದೊಳಗೆ ಭರ್ತಿಯಾಗಬೇಕು. ಈಗಾಗಲೇ ಸ್ಥಾನಮಾನ ಅನುಭವಿಸಿದ ಹಿರಿಯರು ತ್ಯಾಗ ಮಾಡಬೇಕು. ಆಗ ಹೊಸಬರಿಗೆ ಅವಕಾಶ ಸಿಗುತ್ತದೆ. | ಬಸನಗೌಡ ಪಾಟೀಲ ಯತ್ನಾಳ ಶಾಸಕ