ಜಿಲ್ಲೆ

ನಾಳೆ ಸರಗೂರಿನಲ್ಲಿ ವಿಎಸ್‌ಒಇ ಸೈನಿಕ ಶಾಲೆ ಉದ್ಘಾಟನೆ

ಮೈಸೂರು: ಸರಗೂರಿನಲ್ಲಿ ವಿವೇಕ ಸ್ಕೂಲ್ ಆಫ್ ಎಕ್ಸಲೆನ್ಸ್ (ವಿಎಸ್‌ಒಇ) ಸೈನಿಕ ಶಾಲೆಯ ಉದ್ಘಾಟನಾ ಕಾರ್ಯಕ್ರಮ ಸೆ.3ರಂದು ಬೆಳಗ್ಗೆ 10.30ಕ್ಕೆ ಜರುಗಲಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಬಿ.ಸಿ.ನಾಗೇಶ್ ಕಾರ್ಯಕ್ರಮ ಉದ್ಘಾಟಿಸುವರು. ಹೈದರಾಬಾದ್ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಬೋಧಮಯಾನಂದ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಕೊಡಗು ಸೈನಿಕ ಶಾಲೆಯ ಪ್ರಾಂಶುಪಾಲ ಕರ್ನಲ್ ಜಿ.ಕಣ್ಣನ್ ಪಾಲ್ಗೊಳ್ಳಲಿದ್ದಾರೆ. ವಿವೈಎಸ್‌ಎಂ ಉಪಾಧ್ಯಕ್ಷ ಡಾ.ಸುಧೀರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ (ಎಸ್‌ವಿವೈಎಂ) ಶಿಕ್ಷಣ ವಿಭಾಗದ ಮುಖ್ಯಸ್ಥ ಎಸ್.ಪ್ರವೀಣ್‌ಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯಗಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸುವ ಉದ್ದೇಶದಿಂದ 2002ರಲ್ಲಿ ಎಸ್‌ವಿವೈಎಂ ಘಟಕವಾದ ವಿಎಸ್‌ಒಇ ಅನ್ನು ಪ್ರಾರಂಭಿಸಲಾಗಿದೆ. 567 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದೀಗ ರಕ್ಷಣಾ ಸಚಿವಾಲಯದ ಸೈನಿಕ್ ಸ್ಕೂಲ್ ಸೊಸೈಟಿ (ಎಸ್‌ಎಸ್‌ಎಸ್)ಯು ಸೈನಿಕ ಶಾಲೆಗೆ ಅನುಮೋದನೆ ನೀಡಿದೆ. ಇದು ರಾಜ್ಯದ 4ನೇ ಸೈನಿಕ ಶಾಲೆಯಾಗಿದೆ. ವಿಜಯಪುರ, ಕೊಡಗು ಹಾಗೂ ಸಂಗೊಳ್ಳಿಯಲ್ಲಿ ಈಗಾಗಲೇ ಸೈನಿಕ ಶಾಲೆ ಇದೆ. ಮೈಸೂರು ಜಿಲ್ಲೆಯ ಮೊದಲ ಹಾಗೂ ಎನ್‌ಜಿಒದಿಂದ ನಡೆಸಲಾಗುವ ರಾಜ್ಯದ ಏಕೈಕ ಸೈನಿಕ ಶಾಲೆ ಎಂಬ ಹಿರಿಮೆಗೆ ಇದು ಭಾಜನವಾಗಿದೆ ಎಂದರು.

2022-23ನೇ ಸಾಲಿಗೆ ಬೋಧನಾ ಶುಲ್ಕ 45 ಸಾವಿರ ರೂ. ಹಾಗೂ ಹಾಸ್ಟೆಲ್‌ಗೆ 36 ಸಾವಿರ ರೂ. ನಿಗದಿಪಡಿಸಲಾಗಿದೆ. ಪ್ರಸ್ತಕ ಶೈಕ್ಷಣಿಕ ಸಾಲಿಗೆ 60 ವಿದ್ಯಾರ್ಥಿಗಳಿಗೆ ಸೈನಿಕ ಶಾಲೆಯಲ್ಲಿ 6ನೇ ತರಗತಿಗೆ ಪ್ರವೇಶ ಒದಗಿಸಲಾಗುವುದು. ಈ ಪೈಕಿ ಶೇ. 40ರಷ್ಟು ಸೀಟ್‌ಗಳು ಅಖಿಲ ಭಾರತ ಕೋಟ ಆಗಿರುತ್ತದೆ. ಎಐಎಸ್‌ಎಸ್‌ಇ ಮೂಲಕ ಪ್ರವೇಶ ಪ್ರಕ್ರಿಯೆ ನಡೆಯಲಿದೆ. ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಮತ್ತು ಹರಿಯಾಣ ರಾಜ್ಯಗಳಿಂದ ಈವರೆಗೆ 11 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 2ನೇ ಸುತ್ತಿನ ಕೌನ್ಸೆಲಿಂಗ್ ನಡೆಯುತ್ತಿದೆ. ಉಳಿದ 36 ಸೀಟ್‌ಗಳು ವಿವೇಕಾನಂದ ಸ್ಕೂಲ್ ಆಫ್ ಎಕ್ಸಲೆನ್ಸ್‌ನ ವಿದ್ಯಾರ್ಥಿಗಳಿಗೆ ಮೀಸಲಾಗಿವೆ. ಸೆ.6ರಂದು ಲಿಖಿತ ಪರೀಕ್ಷೆಯ ಮೂಲಕ ಭರ್ತಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಎಸ್‌ವಿವೈಎಂ ನಿರ್ದೇಶಕ, ನಿವೃತ್ತ ಏರ್ ಕಮೋಡರ್ ಆರ್.ಎನ್.ಜಯಸಿಂಹ ಇದ್ದರು.