ಹಾಸನ: ನಗರದ ನಂದಗೋಕುಲ ಕನ್ವೆನ್ಷನ್ ಹಾಲ್‌ನಲ್ಲಿ ಶನಿವಾರ ಹಾಸನ ಜಿಲ್ಲೆಯ ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಪ್ರವಾಸೋದ್ಯಮದ ಕುರಿತು ಸಭೆ ನಡೆಯಲಿದೆ ಎಂದು ಜಿಲ್ಲಾ ಸಣ್ಣ ಕೈಗಾರಿಕಾ ಸಂಸ್ಥೆಗಳ ಅಧ್ಯಕ್ಷ ಎಚ್.ಎ. ಕಿರಣ್ ತಿಳಿಸಿದರು.
ಹಾಸನ ಜಿಲ್ಲೆಯಲ್ಲಿ ವಾಣಿಜ್ಯ, ವ್ಯಾಪಾರ ಹಾಗೂ ಉದ್ಯಮ ಬೆಳವಣಿಗೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಿದ್ದು, ಹಾಸನ ಜಿಲ್ಲೆಯಲ್ಲಿ ಇನ್ನಷ್ಟು ಕೈಗಾರಿಕೆಗಳನ್ನು ಸ್ಥಾಪಿಸಿ ಸ್ಥಳೀಯರಿಗೆ ಅನುಕೂಲ ಕಲ್ಪಿಸಲು ಯೋಜಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಭೆಗೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಶಾಸಕರಾದ ಸ್ವರೂಪ್ ಪ್ರಕಾಶ್, ಎಚ್.ಕೆ ಸುರೇಶ್, ಸಿ.ಎನ್. ಬಾಲಕೃಷ್ಣ, ಎ.ಮಂಜು, ಸಿಮೆಂಟ್ ಮಂಜು, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಹಾಗೂ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಕೆಸಿಸಿಐ ಅಧ್ಯಕ್ಷ ಬಿ.ವಿ. ರಾಜಗೋಪಾಲ್ ರೆಡ್ಡಿ ಹಾಗೂ ಎಚ್‌ಡಿಸಿಸಿಐ ಅಧ್ಯಕ್ಷ ಧನಪಾಲ್ ಉಪಸ್ಥಿತರಿರಲಿದ್ದಾರೆ. ಜಿಲ್ಲೆಯ ಉದ್ಯಮ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕೈಗಾರಿಕಾ ಸಂಸ್ಥೆಯ ಸಂಘಟನೆಗಳ ಮುಖಂಡರಾದ ಭರತ್ ಕುಮಾರ್, ಎಂ. ಧನಪಾಲ್, ಕಾರ್ಯದರ್ಶಿ ಹರೀಶ್ ಸೇರಿ ಇತರರು ಇದ್ದರು.