ಜಿಲ್ಲೆ

ನಾಳೆ ಬೀಜಾಂಕುರ ಕಾರ್ಯಕ್ರಮಕ್ಕೆ ಚಾಲನೆ

ಬೇಲೂರು: ಲಯನ್ಸ್ ಸಂಸ್ಥೆ 317 ಡಿ ವ್ಯಾಪ್ತಿಯ 12 ಪ್ರಾಂತ್ಯದ ಎಂಟು 8 ಲಯನ್ಸ್ ಸಂಸ್ಥೆಗಳ ಸಹಯೋಗದೊಂದಿಗೆ ಆ.23ರಂದು ಪಟ್ಟಣದ ಬಿಕ್ಕೋಡು ರಸ್ತೆಯ ಕಾಚೀಹಳ್ಳಿಯ ಅರಣ್ಯದಲ್ಲಿ ಗಿಡ ನೆಡುವ ಮತ್ತು ಜೀಜಾಂಕುರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಲಯನ್ಸ್ ಸಂಸ್ಥೆ ಪ್ರಾಂತೀಯ ಅಧ್ಯಕ್ಷ ಅಬ್ದುಲ್ ಲತೀಫ್ ಹೇಳಿದರು.

ಸರ್ಕಾರದಿಂದ ಯಾವುದೇ ಅನುದಾನ ಇಲ್ಲದೆ ಲಯನ್ಸ್ ಸದಸ್ಯರು ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಇದರ ಜತೆಗೆ ಅರಣ್ಯ ಭೂಮಿ ಸಂರಕ್ಷಣೆಯೊಂದಿಗೆ ಪರಿಸರ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ನಡಿಗೆ ಪರಿಸದರ ಕಡೆಗೆ ಎಂಬ ಘೋಷವಾಕ್ಯದೊಂದಿಗೆ 8 ಸಾವಿರ ಗಿಡ ನೆಡುವ ಮತ್ತು (ಸೀಡ್ ಬಾಲ್) ಬೀಜಾಂಕುರ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಶಾಸಕರಾದ ಎಚ್.ಕೆ.ಸುರೇಶ್, ಸಿಮೆಂಟ್ ಮಂಜು ಉದ್ಘಾಟಿಸಲಿದ್ದಾರೆ. ನಂತರ ಗಿಡಗಳನ್ನು ನೆಟ್ಟು, ಪ್ರಸಾದಿಹಳ್ಳಿ ನಡುತೋಪು ಮತ್ತು ಮಲಸಾವರ ಗುಂಡು ತೋಪಿನಲ್ಲಿ ಬೀಜಾಂಕುರ ನಡೆಯಲಿದೆ. ಕಾರ್ಯಕ್ರಮಕ್ಕೆ ಅರಣ್ಯ ಇಲಾಖೆ ಸಹಕಾರ ನೀಡುತ್ತಿದೆ. ಜಿಲ್ಲಾ ಪ್ರಾಂತಪಾಲ ಅರವಿಂದ ಶೇಣ್ಯ ಹಾಗೂ ಸಂಸ್ಥೆ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಲಯನ್ಸ್ ಸಂಸ್ಥೆ ಅಧ್ಯಕ್ಷೆ ತಾರಾಮಣಿ ಸುರೇಶ್ ಮಾತನಾಡಿ, ಸಂಸ್ಥೆ ಶೈಕ್ಷಣಿಕ, ಸಮಾಜ ಮುಖಿಯಾಗಿ ಜನರ ಸೇವಾ ಕಾರ್ಯಗಳೊಂದಿಗೆ ಪರಿಸರ ಸಂರಕ್ಷಣೆ, ಅಂಗವಿಕಲರಿಗೆ ಸಹಾಯ, ಮಹಿಳಾ ಸಬಲೀಕರಣಕ್ಕೆ ಮುಂದಾಗಿದೆ. ಇತ್ತೀಚಿನ ದಿನಗಳಲ್ಲಿ ಮನುಷ್ಯನ ಮೇಲೆ ಆಧುನಿಕ ಕಾಯಿಲೆಗಳು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಶುದ್ಧ ಗಾಳಿ ಪಡೆಯುವಲ್ಲಿ ಅರಣ್ಯಗಳ ಪಾತ್ರ ದೊಡ್ಡದಾಗಿದೆ. ಆದ್ದರಿಂದ ಇಂತಹ ಉತ್ತಮ ಕೆಲಸಕ್ಕೆ ಎಲ್ಲರೂ ಸಹಕರಿಸಬೇಕು. ಕಾರ್ಯಕ್ರಮದಲ್ಲಿ ಬೇಲೂರು, ಬಿಕ್ಕೋಡು, ಅರೇಹಳ್ಳಿ, ಸಕಲೇಶಪುರ, ಆಲೂರು, ಮಗ್ಗೆ ರಾಯರ ಕೊಪ್ಪಲು, ಕೆಂಚಮ್ಮನ ಹೊಸಕೋಟೆ, ಕೋಣನೂರಿನ ಲಯನ್ಸ್ ಸಂಸ್ಥೆ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.

ವಲಯಾಧ್ಯಕ್ಷ ಚಾಮರಾಜ್, ಬಿಕ್ಕೋಡು ಸಂಸ್ಥೆ ಅಧ್ಯಕ್ಷ ಲತೇಶ್, ಬೇಲೂರು ಸಂಸ್ಥೆ ಕಾರ್ಯದರ್ಶಿ ಆದರ್ಶ, ಖಜಾಂಚಿ ಸಂತೋಷ ಇದ್ದರು.