ಶಿವಮೊಗ್ಗ: ನಗರ ಪಾಲಿಕೆಯಿಂದ ಸೆ.23ರ ಬೆಳಗ್ಗೆ 10.30ಕ್ಕೆ ಅಂಬೇಡ್ಕರ್ ಭವನದಲ್ಲಿ ಪೌರ ಕಾರ್ವಿುಕರ ದಿನ ಆಚರಣೆ ಮಾಡಲಿದ್ದು, 717 ಪೌರ ಕಾರ್ವಿುಕರಿಗೆ ತಲಾ ಒಂದು ಜತೆ ಬೆಳ್ಳಿ ದೀಪ ನೀಡಲಾಗುವುದು ಎಂದು ಮೇಯರ್ ಸುವರ್ಣಾ ಶಂಕರ್ ತಿಳಿಸಿದರು.
ಪ್ರತಿ ವರ್ಷ ಪೌರ ಕಾರ್ವಿುಕರ ದಿನಾಚರಣೆ ಪ್ರಯುಕ್ತ ಆಟೋಟ, ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿ ಅವನ್ನು ಪ್ರವಾಸ ಕರೆದೊಯ್ಯಲಾಗಿತ್ತು. ಈ ವರ್ಷ ಇದೇ ಉದ್ದೇಶಕ್ಕೆ 16 ಲಕ್ಷ ರೂ. ಅನುದಾನ ಮೀಸಲಿರಿಸಲಾಗಿತ್ತು. ಕರೊನಾ ಕಾರಣದಿಂದ ಆಟೋಟ ಸ್ಪರ್ಧೆ ಏರ್ಪಡಿಸಿಲ್ಲ, ಸರಳ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉಪಮೇಯರ್ ಸುರೇಖಾ ಮುರಳೀಧರ್, ಆಡಳಿತ ಪಕ್ಷ ನಾಯಕ ಎಸ್.ಎನ್.ಚನ್ನಬಸಪ್ಪ, ಪ್ರತಿಪಕ್ಷ ನಾಯಕ ಎಚ್.ಸಿ.ಯೋಗೇಶ್, ಆಯುಕ್ತ ಚಿದಾನಂದ ವಟಾರೆ, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಉಪಸ್ಥಿತರಿದ್ದರು.