ತುಮಕೂರು : ತುಮಕೂರು ವಿವಿ ಇತಿಹಾಸದಲ್ಲೇ ಅತೀ ಹೆಚ್ಚು 142 ಅಭ್ಯರ್ಥಿಗಳು ಈ ಬಾರಿ ಘಟಿಕೋತ್ಸವದಲ್ಲಿ ಪಿ.ಎಚ್‌ಡಿ. ಪದವಿಗೆ ಭಾಜನರಾಗಲಿದ್ದು, ವಿವಿ ಹೊಸ ದಾಖಲೆ ಬರೆದಿದೆ. 2019ರಲ್ಲಿ 67 ಅಭ್ಯರ್ಥಿಗಳು, 2020ರಲ್ಲಿ 94 ಅಭ್ಯರ್ಥಿಗಳಿಗೆ ಪಿಎಚ್‌ಡಿ., ಪದವಿ ನೀಡಿ ದಾಖಲೆ ಸೃಷ್ಟಿಸಿದ್ದ ತುಮಕೂರು ವಿವಿ ಹಳೆಯ ದಾಖಲೆಯನ್ನು ಪುಡಿಗಟ್ಟಿದೆ.
3 ಅಭ್ಯರ್ಥಿಗಳು ಡಿ.ಲಿಟ್ ಪದವಿ, 142 ಅಭ್ಯರ್ಥಿಗಳು ಪಿಎಚ್‌ಡಿ., ಪದವಿ, 1716 ಅಭ್ಯರ್ಥಿಗಳು ಸ್ನಾತಕೋತ್ತರ ಹಾಗೂ 7992 ಅಭ್ಯರ್ಥಿಗಳು ಸ್ನಾತಕ ಪದವಿ ಸೇರಿ ಒಟ್ಟು 9853 ಅಭ್ಯರ್ಥಿಗಳು 14ನೇ ಘಟಿಕೋತ್ಸವದಲ್ಲಿ ಪದವಿ ಪಡೆಯಲಿದ್ದಾರೆ ಎಂದು ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
14ನೇ ಘಟಿಕೋತ್ಸವ: ಮಾ.5ರಂದು ಬೆಳಗ್ಗೆ 11ಕ್ಕೆ ವಿವಿ ಡಾ.ಶ್ರೀ ಶಿವಕುಮಾರಸ್ವಾಮೀಜಿ ಸಭಾಂಗಣದಲ್ಲಿ 14ನೇ ಘಟಿಕೋತ್ಸವ ನಡೆಯಲಿದೆ. ವಿವಿ ಕುಲಾಧಿಪತಿ, ರಾಜ್ಯಪಾಲ ವಿ.ಆರ್.ವಾಲಾ ಅಧ್ಯಕ್ಷತೆ ವಹಿಸುವರು, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಭಾಗವಹಿಸುವರು. ರಾಜಸ್ಥಾನ ಕೇಂದ್ರೀಯ ವಿಶ್ವವಿದ್ಯಾಲಯ ಕುಲಾಧಿಪತಿ, ಇಸ್ರೋ ವಿಶ್ರಾಂತ ಅಧ್ಯಕ್ಷ, ಪದ್ಮವಿಭೂಷಣ ಡಾ.ಕೆ.ಕಸ್ತೂರಿರಂಗನ್ ಘಟಿಕೋತ್ಸವ ಭಾಷಣ ಮಾಡುವರು ಎಂದರು.
142 ಪಿಎಚ್‌ಡಿ ಪದವಿ: ಅತಿಹೆಚ್ಚು 142 ಅಭ್ಯರ್ಥಿಗಳು ಪಿಎಚ್‌ಡಿ ಪದವಿ ಪಡೆಯುತ್ತಿರುವುದು ವಿವಿ ಇತಿಹಾಸದಲ್ಲೇ ಮತ್ತೊಂದು ಸಾಧನೆ. ಎಲ್ಲ ಸ್ನಾತಕೋತ್ತರ ಪದವಿಗಳಿಗೆ ತಲಾ ಐದು ರ‌್ಯಾಂಕ್, ಬಿಎ, ಬಿಎಸ್ಸಿ., ಬಿ.ಕಾಂ., ಬಿಬಿಎಂ, ಬಿ.ಇಡಿ., (ಸೆಮಿಸ್ಟರ್ ಪದ್ಧತಿ)ಗಳಿಗೆ ತಲಾ 10 ರ‌್ಯಾಂಕ್, ಬಿಎಫ್‌ಎ-1 ರ‌್ಯಾಂಕ್, ಬಿ.ವೋಕ್. -3, ಬಿ.ಪಿ.ಇಡಿ.,-5 ಹಾಗೂ ಬಿಎ ಇಂಟಿಗ್ರೇಟೆಡ್ ಕನ್ನಡ ಪಂಡಿತ್‌ಗೆ 2 ರ‌್ಯಾಂಕ್ ಘೋಷಿಸಲಾಗಿದೆ. ಒಟ್ಟು 73 ವಿದ್ಯಾರ್ಥಿಗಳಿಗೆ 92 ಚಿನ್ನದ ಪದಕಗಳನ್ನು ಹಾಗೂ 6 ನಗದು ಬಹುಮಾನಗಳನ್ನು ವಿಶ್ವವಿದ್ಯಾನಿಲಯವು ಈ ಬಾರಿಯ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಿದೆ. ಮೌಲ್ಯಮಾಪನ ಕುಲಸಚಿವ ಪ್ರೊ.ನಿರ್ಮಲ್‌ರಾಜು, ಪ್ರಭಾರ ಕುಲಸಚಿವ ಪ್ರೊ.ಬಿ.ಟಿ.ಸಂಪತ್ ಕುಮಾರ್ ಇದ್ದರು.
ಶಿಫಾರಸಾಗಿದ್ದು ಐವರ ಹೆಸರು : 17 ಸಾಧಕರು ಗೌರವ ಡಾಕ್ಟರೇಟ್‌ಗೆ ಅರ್ಜಿ ಸಲ್ಲಿಸಿದ್ದು, ವಿವಿ ಸಿಂಡಿಕೇಟ್ ಸಭೆಯಲ್ಲಿ ಅಳೆದು ತೂಗಿ ಐವರ ಹೆಸರನ್ನು ತಜ್ಞರ ಸಮಿತಿಗೆ ಶಿಫಾರಸು ಮಾಡಲಾಗಿತ್ತು. ಗೌರವ ಡಾಕ್ಟರೇಟ್ ಆಯ್ಕೆ ತಜ್ಞರ ಸಮಿತಿ ಐವರರಲ್ಲಿ ಮೂವರ ಹೆಸರನ್ನು ಅಂತಿಮಗೊಳಿಸಿ ರಾಜ್ಯಪಾಲರ ಅಂಗಳಕ್ಕೆ ಕಳುಹಿಸಿದ್ದು ಕಳೆದಬಾರಿಯಂತೆ ಈ ಬಾರಿಯು ಒಬ್ಬರನ್ನು ಮಾತ್ರ ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಲಾಗಿದೆ. ಕುಪ್ಪೂರುಶ್ರೀ, ಸುಮಿತ್ರಾ ಹೆಸರು: ಚಿಕ್ಕನಾಯಕನಹಳ್ಳಿ ಕುಪ್ಪೂರು ಗದ್ದುಗೆ ಸಂಸ್ಥಾನ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ತಿಪಟೂರಿನ ರಂಗಭೂಮಿ ಕಲಾವಿದೆ ಸುಮಿತ್ರಾ, ಶಿರಾದ ರಾಮಚಂದ್ರಪ್ಪ, ತುರುವೇಕೆರೆ ಮಂಜುನಾಥ್ ಹಾಗೂ ಬೆಂಗಳೂರಿನ ಉದ್ಯಮಿ ಐ.ಎಸ್.ಪ್ರಸಾದ್ ಹೆಸರನ್ನು ಸಿಂಡಿಕೇಟ್ ಸಭೆಯಲ್ಲಿ ಶಿಫಾರಸು ಮಾಡಲಾಗಿತ್ತು. ಆದರೆ, ರಾಜ್ಯ ಮಹಿಳಾ ವಿವಿ ವಿಶ್ರಾಂತ ಕುಲಪತಿ ಡಾ.ಮೀರಾ ರಾಜೀವ್ ಚಂದಾವಾರ್ಕರ್ ನೇತೃತ್ವದ ತಜ್ಞರ ಸಮಿತಿ ಮೂವರ ಹೆಸರನ್ನು ಅಂತಿಮಗೊಳಿಸಿ ರಾಜ್ಯಪಾಲರ ಅಂಗಳಕ್ಕೆ ಸಂಪ್ರದಾಯದಂತೆ ಕಳುಹಿಸಿದ್ದು ಐ.ಎಸ್.ಪ್ರಸಾದ್ ಹೆಸರಿಗೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದಾರೆ.
ಐ.ಎಸ್.ಪ್ರಸಾದ್ ಕೊಡುಗೆ ಏನು? : ಸಾಮಾಜಿಕ ಸೇವಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಹೆಸರಾಂತ ಉದ್ಯಮಿ, ಚಾರ್ಟ್‌ರ್ಡ್ ಅಕೌಂಟೆಂಟ್ ಐ.ಎಸ್. ಪ್ರಸಾದ್ ಅವರಿಗೆ ಈ ಬಾರಿ ತುಮಕೂರು ವಿವಿ ಗೌರವ ಡಾಕ್ಟರೇಟ್ ಪದವಿ ನೀಡಲಿದೆ. ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀ (ಎಫ್‌ಕೆಸಿಸಿಐ)ನ ಹಿರಿಯ ಉಪಾಧ್ಯಕ್ಷರಾಗಿರುವ ಪ್ರಸಾದ್, ವೈದ್ಯಕೀಯ ಸೌಲಭ್ಯ, ಶಿಕ್ಷಣ, ಯುವಸಬಲೀಕರಣ ಸೇರಿ ಸಮಾಜಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿದ್ವಾಯಿ ಕ್ಯಾನ್ಸರ್ ಡ್ರಗ್ ಫೌಂಡೇಷನ್, ರಾಜ್ಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಘ, ಐಸಿಎಐ ನವದೆಹಲಿ, ಲಯನ್ಸ್ ಕ್ಲಬ್, ಕರ್ನಾಟಕ ಆರ್ಯ ವೈಶ್ಯ ಚಾರಿಟೇಬಲ್ ಟ್ರಸ್ಟ್, ವಾಸವಿ ವಿದ್ಯಾನಿಕೇತನ ಟ್ರಸ್ಟ್, ಮೊದಲಾದ ಸಂಘಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ಹೊಸ ಕ್ಯಾಂಪಸ್‌ನಲ್ಲಿ 4 ವಿಭಾಗ : ಬಿದರೆಕಟ್ಟೆಯಲ್ಲಿನ ತುಮಕೂರು ವಿವಿ ಹೊಸ ಕ್ಯಾಂಪಸ್ ಶೀಘ್ರ ಉದ್ಘಾಟನೆ ಆಗಲಿದ್ದು, ಈ ಆವರಣದಲ್ಲಿ ಬಯೋಟೆಕ್ನಾಲಜಿ, ಮೈಕ್ರೋಬಯಾಲಜಿ, ಪರಿಸರ ವಿಜ್ಞಾನ, ಸಮಾಜಕಾರ್ಯ ವಿಭಾಗಗಳು ಕಾರ್ಯಾರಂಭ ಮಾಡಲು ಉತ್ಸುಕವಾಗಿವೆ ಎಂದು ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ತಿಳಿಸಿದರು.
ನಿವೃತ್ತ ಐಎಫ್‌ಎಸ್ ಅಧಿಕಾರಿಗೆ ಡಿ.ಲಿಟ್ : ತುಮಕೂರಿನ ಎಸ್‌ಐಟಿ ಬಡಾವಣೆಯ ನಿವೃತ್ತ ಐಎಫ್‌ಎಸ್ ಅಧಿಕಾರಿ ಬಿ.ಚಿಕ್ಕಪ್ಪಯ್ಯ ಅವರ ಕಾಡುಗೊಲ್ಲರ ಸಮಾಜ ಮತ್ತು ಸಾಂಸ್ಕೃತಿಯ; ಚಾರಿತ್ರಿಕ ಅಧ್ಯಯನ ಎಂಬ ಮಹಾಪ್ರಬಂಧಕ್ಕೆ ತುಮಕೂರು ವಿಶ್ವವಿದ್ಯಾಲಯ ಡಿ.ಲಿಟ್ (ಡಾಕ್ಟರ್ ಆಫ್ ಲಿಟರೇಚರ್) ಪದವಿ ನೀಡಿ ಗೌರವಿಸಿದೆ.
17 ಮಂದಿ ಗೌರವ ಡಾಕ್ಟರೇಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 8-9 ಮಂದಿ ಜಿಲ್ಲೆಯವರು ಇದ್ದರು. ಸಿಂಡಿಕೇಟ್ ಸಭೆಯಲ್ಲಿ ಚರ್ಚೆ ನಡೆಸಿ ಐವರ ಹೆಸರನ್ನು ಶಿಫಾರಸು ಮಾಡಿದ್ದು ತಜ್ಞರ ಸಮಿತಿ ಮೂವರ ಹೆಸರನ್ನು ಅಂತಿಮಗೊಳಿಸಿತ್ತು. ಗೌರವ ಡಾಕ್ಟರೇಟ್ ಆಯ್ಕೆ ವಿಚಾರದಲ್ಲಿ ನನ್ನ ಹಸ್ತಕ್ಷೇಪ ಏನೂ ಇಲ್ಲ. ಅರ್ಜಿ ಸಲ್ಲಿಸಿಯೇ ಪಡೆಯಬೇಕು. ಪ್ರೊ.ವೈ.ಎಸ್.ಸಿದ್ದೇಗೌಡ ವಿವಿ ಕುಲಪತಿ