ಜಿಲ್ಲೆ

ನಾಳೆ ತಾತಯ್ಯ ಅದ್ಧೂರಿ ಜಯಂತಿ : ಕಂಚಿನ ಪ್ರತಿಮೆ ಅನಾವರಣಕ್ಕೆ ಸಿದ್ಧತೆ

ಕೋಲಾರ: ವರಕವಿ, ಕಾಲ ಜ್ಞಾನಿ ಕೈವಾರ ಶ್ರೀಯೋಗಿ ನಾರೇಯಣ ಯತೀಂದ್ರರ ಜಯಂತಿ, ಪುತ್ಥಳಿ ಅನಾವರಣ ಮಾ.27ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಯಂತಿ ಉಸ್ತುವಾರಿ ಸಮಿತಿ ಅಧ್ಯಕ್ಷ ಎಂ.ವಿ.ರಘು(ಚಿಟ್ಟಿ) ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾತಯ್ಯ ಜಯಂತಿ ಆಚರಿಸುವ ಬಗ್ಗೆ ಬಲಿಜ ಸಮುದಾಯ ಹಲವು ವರ್ಷದಿಂದ ಒತಯ್ತಾಯಿಸುತ್ತಾ ಬಂದಿದ್ದು, ಸರ್ಕಾರ ಈಗ ಈಡೇರಿಸಿರುವುದು ಸ್ವಾಗತಾರ್ಹವಾಗಿದೆ. ಜಯಂತಿಯನ್ನು ಕನ್ನಡ ಮತ್ತು ಸಂಸತಿ ಇಲಾಖೆ, ಜಿಲ್ಲಾ ಬಲಿಜ ಸಂಘ, ಬಲಿಜ ನೌಕರರ ಸೇವಾ ಟ್ರಸ್ಟ್​, ಶ್ರೀ ಯೋಗಿನಾರೇಯಣ ಚಾರಿಟಬಲ್​ ಟ್ರಸ್ಟ್​ ಮತ್ತು ಸಮುದಾಯದ ಸಹಯೋಗದಲ್ಲಿ ಅದ್ದೂರಿಯಾಗಿ ನಡೆಸಲಾಗುತ್ತಿದೆ ಎಂದರು.

ನಗರದ ಟೇಕಲ್​ ರಸ್ತೆಯ ಶ್ರೀವೇಣುಗೋಪಾಲಸ್ವಾಮಿ ಪುಷ್ಕರಣಿ ಬಳಿ ನಿರ್ಮಿಸಿರುವ ಮಂಟಪದಲ್ಲಿ 4.5 ಅಡಿ ಎತ್ತರದ 104 ಕೆಜಿ ತೂಕದ ತಾತಯ್ಯ ಕಂಚಿನ ಪ್ರತಿಮೆಯನ್ನು ಅನಾವರಣ ಮಾಡಲಾಗುವುದಲ್ಲದೆ, ಕಲ್ಯಾಣಿ ಸುತ್ತ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಬಲಿಜ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್​.ರವೀಂದ್ರಕುಮಾರ್​ ಮಾತನಾಡಿ, ಜಯಂತಿಯಂದು ಬೆಳಗ್ಗೆ 10 ಗಂಟೆಗೆ ಟಿ.ಚೆನ್ನಯ್ಯ ರಂಗ ಮಂದಿರದಲ್ಲಿ ಸರ್ಕಾರಿ ಕಾರ್ಯಕ್ರಮ ನಡೆಯಲಿದ್ದು, 11 ಗಂಟೆಗೆ ನಗರದ ವೇಣುಗೋಪಾಲ ಸ್ವಾಮಿ ಪುಷ್ಕರಣಿ ಬಳಿಯ ಮಂಟಪದಲ್ಲಿ ತಾತಯ್ಯನವರ ಪುತ್ಥಳಿ ಪ್ರತಿಷ್ಠಾಪನೆ, ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ತಾತಯ್ಯ ಪಲ್ಲಕ್ಕಿಗಳ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.

ಜಿಲ್ಲಾ ಯೋಗಿ ನಾರೇಯಣ ಚಾರಿಟಬಲ್​ ಟ್ರಸ್ಟ್​ ಪ್ರಧಾನ ಕಾರ್ಯದರ್ಶಿ ಕೆ.ವಿ.ಸುರೇಶ್​ ಕುಮಾರ್​ ಮಾತನಾಡಿ, ಸರ್ಕಾರದ ಮುಂದೆ ದೀರ್ಘಕಾಲದಿಂದ ಬೇಡಿಕೆ ಇಟ್ಟಿದ್ದ ವಿಷಯಗಳಲ್ಲಿ ಪ್ರಮುಖ ಬೇಡಿಕೆಯಾದ 2ಎ ಮೀಸಲಾತಿ ಪೂರ್ಣ ಪ್ರಮಾಣದಲ್ಲಿ ನೀಡಿಲ್ಲವಾದರೂ, ಶಿಕ್ಷಣಕ್ಕೆ ಮೀಸಲಾತಿ ನೀಡಲಾಗಿದೆ. ಉದ್ಯೋಗ, ರಾಜಕೀಯ ಮೀಸಲಾತಿ ನೀಡುವುದೂ ಸೇರಿ ಜಿಲ್ಲೆಯಲ್ಲಿ ತಾತಯ್ಯ ಅಧ್ಯಯನ ಕೇಂದ್ರ ಸ್ಥಾಪಿಸಬೇಕು. ಬಲಿಜ ಸಮುದಾಯದ ಅಭಿವೃದ್ಧಿಗೆ ನಿಗಮ ಸ್ಥಾಪನೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಜಯಂತಿಯಂದು ಮೆರವಣಿಗೆ ನಂತರ ರಂಗಮಂದಿರದಲ್ಲಿ ಜಿಲ್ಲಾ ಯೋಗಿ ನಾರೇಯಣ ಚಾರಿಟಬಲ್​ ಟ್ರಸ್ಟ್​, ಜಿಲ್ಲಾ ಕಸಾಪ ಸಹಯೋಗದಲ್ಲಿ ತತ್ವಪದ ಗಾಯನ ನಡೆಯಲಿದೆ. ಸಮಾರೋಪದಲ್ಲಿ ಗಾಯನ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವುದೆಂದು ವಿವರಿಸಿದರು.

ನಿವೃತ್ತ ಡಿವೈಎಸ್​ಪಿ ವೆಂಕಟಸ್ವಾಮಿ, ಜಿಲ್ಲಾ ಬಲಿಜ ನೌಕರರ ಸೇವಾ ಟ್ರಸ್ಟ್​ ಅಧ್ಯಕ್ಷ ಎಸ್​.ಎಸ್​.ಶ್ರೀಧರ್​, ಮುಖಂಡರಾದ ನೃಪತುಂಗ, ರಾಜೇಶ್​, ಮಂಜುನಾಥ್​, ಸುರೇಶ್​, ಮುನಿಕೃಷ್ಣಪ್ಪ, ಅರುಣಮ್ಮ, ಸಾಮಾಬಾಬು ಇತರರು ಉಪಸ್ಥಿತರಿದ್ದರು.