ಎಚ್.ಡಿ.ರೇವಣ್ಣ 
ಜಿಲ್ಲೆ

ನಾಳೆ ಜಿಲ್ಲೆಗೆ ಎಚ್.ಡಿ. ರೇವಣ್ಣ ಆಗಮನ?ಸ್ವಾಗತಕ್ಕೆ ಸಜ್ಜಾಗಿರುವ ಜೆಡಿಎಸ್ ಮುಖಂಡರು

ಹಾಸನ: ಅಪಹರಣ ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿದ್ದ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಜಾಮೀನಿನ ಮೇಲೆ ಮಂಗಳವಾರ ಬಿಡುಗಡೆಯಾಗಿದ್ದಾರೆ. ಮಂಗಳವಾರ ಮಧ್ಯಾಹ್ನದ ನಂತರ ಬಿಡುಗಡೆಯಾದ ನಂತರ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ತಮ್ಮ ತಂದೆ ಎಚ್.ಡಿ. ದೇವೇಗೌಡ ಅವರ ನಿವಾಸಕ್ಕೆ ತೆರಳಿದರು. ಬುಧವಾರ ತವರು ಜಿಲ್ಲೆ ಹಾಸನಕ್ಕೆ ಆಗಮಿಸುವ ಸಾಧ್ಯತೆ ಇದ್ದು, ತಮ್ಮ ನಾಯಕನ ಸ್ವಾಗತಕ್ಕೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಸಜ್ಜಾಗಿದ್ದಾರೆ.
ಮಂಕಾಗಿದ್ದ ದಳ ಕೋಟೆಯಲ್ಲಿ ಇದೀಗ ಉತ್ಸಾಹ ಹೆಚ್ಚಾಗಿದೆ. ರೇವಣ್ಣ ಹಾಸನಕ್ಕೆ ಬರುವ ವೇಳೆ ಜಿಲ್ಲೆಯ ಗಡಿಯಲ್ಲೇ ಸ್ವಾಗತ ಕೋರಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ದೊಡ್ಡ ಸಂಭ್ರಮಾಚರಣೆ ಇಲ್ಲದಿದ್ದರೂ ತಮ್ಮ ನೆಚ್ಚಿನ ನಾಯಕನಿಗೆ ಸ್ವಾಗತ ಕೋರಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಬುಧವಾರ ಎಚ್.ಡಿ. ರೇವಣ್ಣ ಅವರು ಹಿರೀಸಾವೆ, ಚನ್ನರಾಯಪಟ್ಟಣ ಮೂಲಕ ಹೊಳೆನರಸೀಪುರಕ್ಕೆ ಆಗಮಿಸಿ ತಮ್ಮ ನಿವಾಸಕ್ಕೆ ತೆರಳಲಿದ್ದಾರೆ. ಆನಂತರ ಹೊಳೆನರಸೀಪುರದ ಲಕ್ಷ್ಮೀನರಸಿಂಹ ದೇವಾಲಯ, ಎಚ್.ಡಿ.ದೇವೇಗೌಡರ ಹುಟ್ಟೂರು ಹರದನಹಳ್ಳಿ ಗ್ರಾಮದಲ್ಲಿರುವ ಮನೆ ದೇವರು ದೇವೇಶ್ವರ, ಮಾವಿನಕೆರೆ ಬೆಟ್ಟದ ರಂಗನಾಥಸ್ವಾಮಿಗೆ ಪೂಜೆ ಸಲ್ಲಿಸಲಿದ್ದಾರೆ. ಹೊಳೆನರಸೀಪುರದಲ್ಲಿ ಇದ್ದ ವೇಳೆ ನಿತ್ಯವೂ ಈ ಮೂರು ದೇವಾಲಯಗಳಿಗೆ ಎಚ್.ಡಿ. ರೇವಣ್ಣ ಭೇಟಿ ನೀಡುವ ಪದ್ಧತಿ ರೂಢಿಸಿಕೊಂಡಿದ್ದರು.