ಜಿಲ್ಲೆ

ನಾಳೆ ಕಾರ್ಗಿಲ್ ವಿಜಯೋತ್ಸವ

ಬೆಳಗಾವಿ: ಕಾರ್ಗಿಲ್ ಯುದ್ಧದಲ್ಲಿ ಭಾರತ ಜಯಗಳಿಸಿ 26 ವರ್ಷ ಕಳೆದಿವೆ. ಪಾಕಿಸ್ತಾನ ವಿರುದ್ಧ ಆಪರೇಷನ್ ಸಿಂಧೂರ ನಡೆಸಿ ಮತ್ತೊಮ್ಮೆ ಭಾರತ ಪರಾಕ್ರಮ ಮೆರೆದಿದೆ. ಜು.26ರಂದು 26ನೇ ಕಾರ್ಗಿಲ್ ವಿಜಯೋತ್ಸವ ಹಾಗೂ ಆಪರೇಷನ್ ಸಿಂಧೂರ ವಿಜಯೋತ್ಸವ ಜಂಟಿಯಾಗಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಮಾಜಿ ಸೈನಿಕರ ಸಂಘಟನೆಗಳ ಮಹಾ ಒಕ್ಕೂಟದ ಅಧ್ಯಕ್ಷ ಜಗದೀಶ ಪೂಜೇರಿ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳಗ್ಗೆ 8.30ಕ್ಕೆ ಕಿಲ್ಲಾ ದುರ್ಗಾದೇವಿ ಮಂದಿರ ವೃತ್ತದಿಂದ ಮಾಜಿ ಸೈನಿಕರ ಬೈಕ್ ರ‌್ಯಾಲಿ ನಡೆಯಲಿದೆ. ರ‌್ಯಾಲಿಯು ಬಸ್ ನಿಲ್ದಾಣ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಕೃಷ್ಣದೇವರಾಯ ವೃತ್ತದ ಮೂಲಕ ಸಂಚರಿಸಿ ಧರ್ಮನಾಥ ಭವನ ತಲುಪಲಿದೆ ಎಂದರು.

10.30ಕ್ಕೆ ಧರ್ಮನಾಥ ಭವನದಲ್ಲಿ ಪ್ರಮುಖ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಂಗಳೂರಿನ ವಾಗ್ಮಿ ಹಾರಿಕಾ ಮಂಜುನಾಥ ಮುಖ್ಯಅತಿಥಿಯಾಗಿ ಭಾಷಣ ಮಾಡುವರು. ಆಪರೇಷನ್ ಸಿಂಧೂರನಲ್ಲಿ ಗೋಕಾಕ ತಾಲೂಕಿನ ಬೆಣಚನಮರಡಿ ಗ್ರಾಮದ ಯೋಧ ಈರಪ್ಪ ಜನಕಟ್ಟಿ ಭಾಗಿಯಾಗಿ ಒಂದು ಕೈ ಕಳೆದುಕೊಂಡಿದ್ದಾರೆ. ಹೀಗಾಗಿ ಅವರಿಗೆ ‘ಸೈನಿಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಜತೆಗೆ ಆಪರೇಷನ್ ಸಿಂಧೂರದ ಪ್ರಮುಖ ಭಾಗವಾಗಿದ್ದ ಕರ್ನಲ್ ಸೋಫಿಯಾ ಖುರೇಶಿ ಮಾವ ಗೌಸಸಾಬ್ ಬಾಗೇವಾಡಿ ಅವರನ್ನೂ ಸನ್ಮಾನಿಸಲಾಗುತ್ತಿದೆ ಎಂದು ಹೇಳಿದರು.

ಇದೇ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕ ಮಾಜಿ ಸೈನಿಕರು ಹಾಗೂ ಸೈನಿಕರ ಮಕ್ಕಳನ್ನು, ರಾಜ್ಯಮಟ್ಟದ ಉತ್ತಮ ಉಪನ್ಯಾಸಕ ಪ್ರಶಸ್ತಿ ಪುರಸ್ಕೃತರಾಗಿರುವ ವಾಯುಸೇನೆಯ ನಿವೃತ್ತ ಜೆಡಬ್ಲುೃಒ ಗಂಗಾಧರ ಬೆಟಗೇರಿ, ಮಾಜಿ ಸೈನಿಕರ ಮಕ್ಕಳಾದ ಕರಾಟೆ ಸಾಧಕಿ ವೈಷ್ಣವಿ ನಿರ್ವಾಣಿ, ಚಿತ್ರನಟಿ ಪ್ರಿಯಾ ಸವದಿ ಅವರನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು. ಒಕ್ಕೂಟದ ಉಪಾಧ್ಯಕ್ಷ ಸಂಗಪ್ಪ ಮೇಟಿ, ಶಿವಬಸಪ್ಪ ಕಾಡನ್ನವರ, ಸಂತೋಷ ಹಿರೇಮಠ ಇತರರಿದ್ದರು.