ಹಾಸನ: ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಆಗಸ್ಟ್ 21ರಿಂದ 25ರವರೆಗೆ ಐದು ದಿನಗಳ ಕಾಲ 3ನೇ ವರ್ಷದ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ನಾಡಪ್ರಭು ಕೆಂಪೇಗೌಡ ಕಲಾಸಂಘದ ಅಧ್ಯಕ್ಷ ಬಿ.ಕೆ. ರಂಗಸ್ವಾಮಿ ತಿಳಿಸಿದರು.
ಶ್ರೀ ಅನ್ನಪೂರ್ಣೇಶ್ವರಿ ಕಲಾಸಂಘ ಮತ್ತು ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಮೂರನೇ ವರ್ಷದ ನಾಟಕೋತ್ಸವವನ್ನು ಆ. 21ರಿಂದ 25ರವರೆಗೂ ಪ್ರತಿದಿನ ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ಆಯೋಜನೆ ಮಾಡಲಾಗಿದೆ. ಹೆಸರಾಂತ ಕಲಾತಂಡಗಳಿಂದ ನಾಟಕ ಉತ್ಸವ ನಡೆಯಲಿದೆ. ಚಂದ್ರಶೇಖರ್ ಅವರ ಮಾಲೀಕತ್ವದ ಒರಿಜಿನಲ್ ಬಂದೋರು ಡ್ರಾಮಾ ಸೀನರಿ ಅವರ ಭವ್ಯ ರಂಗಸಂಚಿಕೆಯಲ್ಲಿ ನಾಟಕೋತ್ಸವ ಮೂಡಿ ಬರಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಆ.21ರಂದು ರಂಗಸಂಪದ ಕಲಾಸಂಘದ ವತಿಯಿಂದ ಶನಿಪ್ರಭಾವ, ಆ.22ರಂದು ಜೈ ಮಾರುತಿ ಕಲಾಸಂಘದ ವತಿಯಿಂದ ಸಂಪೂರ್ಣ ರಾಮಾಯಣ, 23ರಂದು ಚಾಮುಂಡೇಶ್ವರಿ ಜಾನಪದ ಮತ್ತು ರಂಗಭೂಮಿ ಕಲಾಸಂಘದ ವತಿಯಿಂದ ದೇವಿ ಮಹಾತ್ಮೆ, 24ರಂದು ದ್ಯಾಮ ಕೃಪಾಪೋಷಿತಕ ನಾಟಕ ಮಂಡಳಿ ವತಿಯಿಂದ ಧರ್ಮರಾಜ ಸ್ಥಾಪನೆ, ಕೊನೆಯ ದಿನ 25ರಂದು ಸಂಗಮೇಶ್ವರ ಕಲಾ ಸಂಘದ ವತಿಯಿಂದ ಕುರುಕ್ಷೇತ್ರ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಹೇಳಿದರು.
ನಾಟಕೋತ್ಸವಕ್ಕೆ ಉಚಿತ ಪ್ರವೇಶವಿದ್ದು, ಸಾರ್ವಜನಿಕರು ಹಾಗೂ ಇಂದಿನ ಯುವ ಪೀಳಿಗೆಯಲ್ಲಿ ನಮ್ಮ ನಾಡಿನ ಸಂಸ್ಕೃತಿ ಮತ್ತು ಕಲೆಯನ್ನು ಉಳಿಸುವ ಸಲುವಾಗಿ ಈ ನಾಟಕೋತ್ಸವ ಆಯೋಜನೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಯುವಕರು ನಾಟಕ ಪ್ರಿಯರು ಆಗಮಿಸಿ ಯಶಸ್ವಿಗೊಳಿಸುವಂತೆ ಕೋರಿದರು.