ಹಾಸನ: ಅಂತಾರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಜು.28 ರಂದು ನಗರದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಭವನದ ಆವರಣದಲ್ಲಿ ಆರೋಗ್ಯ ತಪಾಸಣೆ ಉಚಿತ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ.ವಿ.ಕೆ.ಅಬ್ದುಲ್ ಬಶೀರ್ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ವೈದ್ಯಕೀಯ ಸಂಘ, ಭಾರತೀಯ ರೆಡ್ ಕ್ರಾಸ್ ಆಶ್ರಯದಲ್ಲಿ ಆರೋಗ್ಯ ತಪಾಸಣೆ ಶಿಬಿರ ಮತ್ತು ಔಷಧಿ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಎಲ್ಲಾ ರೀತಿಯ ರೋಗಗಳನ್ನು ಪತ್ತೆ ಹಚ್ಚಲು ತಜ್ಞರ ತಂಡ ಪಾಲ್ಗೊಳ್ಳಲಿದೆ. ಬಿಪಿ, ಸಕ್ಕರೆ ಕಾಯಿಲೆ, ಕ್ಯಾನ್ಸರ್ ನಂತರ ಕಾಯಿಲೆಗಳನ್ನು ಪತ್ತೆ ಹಚ್ಚಿ ಸೂಕ್ತ ಸಲಹೆ ನೀಡಿ ರೋಗಿಗಳ ಗುಣಮುಖರಾಗಿಸಲು ಈ ಶಿಬಿರ ಸಹಕಾರಿಯಾಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವೈದ್ಯರಿಂದ ಉಚಿತ ಸಮಾಲೋಚನೆ, ಬಾಯಿ, ಗಂಟಲು, ಮೂಗು, ಗರ್ಭಕೊಶದ ಕ್ಯಾನ್ಸರ್, ತಲೆ ಮತ್ತು ನರರೋಗ ಸಂಬಂಧಿಸಿದ ಚಿಕಿತ್ಸೆ, ಕೀಲು ಮತ್ತು ಮೂಳೆಗೆ ಸಂಬಂಧಿಸಿದ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುವುದು. ಹಲವು ತಜ್ಞ ವೈದ್ಯರ ತಂಡ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ರೆಡ್ ಕ್ರಾಸ್ ಸಂಸ್ಥೆಯ ಹೆಚ್.ಪಿ.ಮೋಹನ್ ಮಾತನಾಡಿ, ಗರ್ಭಕೋಶ ಕಾಯಿಲೆಯಿಂದ ಹೆಚ್ಚು ಮೃತಪಡುತ್ತಿದ್ದಾರೆ ಎಂದು ವರದಿಯಾಗುತ್ತಿದೆ. ನಾವು ಗರ್ಭಕೋಶದ ಕ್ಯಾನ್ಸರ್ ಬಗ್ಗೆ ಹೆಚ್ಚು ಜಾಗೃತಿ ವಹಿಸಿ ನೂರಕ್ಕೆ ನೂರೂ ಮಂದಿಗೆ ಇದರ ಅರಿವು ಮೂಡಿಸಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡಿದ್ದೇವೆ. ಅನೇಕ ರೋಗಗಳನ್ನು ಪತ್ತೆ ಹಚ್ಚಿ, ರೋಗಿಗಳು ಗುಣಮುಖರಾಗಲು ಬೇಕಾದ ಸೂಕ್ತ ಸಲಹೆ ನೀಡಲಾಗುವುದು. ಆಸ್ಪತ್ರೆಯಲ್ಲಿ ಸುಮಾರು ನಾಲ್ಕೈದು ಸಾವಿರ ವೆಚ್ಚವಾಗುವಂತಹ ರೋಗಗಳ ತಪಾಸಣೆ ಮಾಡಲಾಗುತ್ತದೆ. ಶಿಬಿರಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಉಪಯೋಗ ಪಡೆದುಕೊಳ್ಳಬೇಕು ಮನವಿ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಎನ್.ಶಿವಸ್ವಾಮಿ, ಕಣ್ಣಿನ ತಜ್ಞ ಡಾ.ರಾಕೇಶ್, ಡಾ. ದಾಸ್, ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಕುಮಾರ್ ಹಾಜರಿದ್ದರು.