ಜಿಲ್ಲೆ

ನಾಳೆ ಅಂತರಜಿಲ್ಲಾ ಕುಸ್ತಿ ಪಂದ್ಯಾವಳಿ

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ

ತಾಲೂಕು ಕುಸ್ತಿ ಸಂಘದಿಂದ ನ.25ರಂದು ಬಯಲು ಬಸವಣ್ಣ ದೇವರ ಕಡಲೆಕಾಯಿ ಪರಿಷೆ ಪ್ರಯುಕ್ತ ಅಂತರ ಜಿಲ್ಲಾಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ್ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಸ್ತಿಪಟುಗಳ ತೂಕದ ಮಾನದಂಡಕ್ಕೆ ಅನುಸಾರ ದೊಡ್ಡಬಳ್ಳಾಪುರ ಯುವ ಕಿಶೋರ, ದೊಡ್ಡಬಳ್ಳಾಪುರ ಕಿಶೋರ, ದೊಡ್ಡಬಳ್ಳಾಪುರ ಕುಮಾರ, ದೊಡ್ಡಬಳ್ಳಾಪುರ ಕೇಸರಿ, ದೊಡ್ಡಬಳ್ಳಾಪುರ ಕಂಠೀರವ ಹಾಗೂ ಮಹಿಳಾ ವಿಭಾಗದಲ್ಲಿ (60 ಕೆ.ಜಿ. ಒಳಗಿನ ವಿಭಾಗ) ದೊಡ್ಡಬಳ್ಳಾಪುರ ಕಿಶೋರಿ ವಿಭಾಗಗಳಲ್ಲಿ ಪಂದ್ಯ ಆಯೋಜಿಸಲಾಗಿದೆ ಎಂದರು. ಸಂಘದ ಗೌರವಾಧ್ಯಕ್ಷ ಪೈಲ್ವಾನ್ ಚೌಡಪ್ಪ ಮಾತನಾಡಿ, ಕುಸ್ತಿ ಕಲೆ ನಮ್ಮತಲೆಮಾರಿಗೆ ಕೊನೆಯಾಗಬಾರದು. ಮುಂದಿನ ಪೀಳಿಗೆಗೆ ಗರಡಿ ಮನೆಗಳ ಪರಿಚಯವಾಗಬೇಕು. ಕುಸ್ತಿಯಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವ ಅವಕಾಶಗಳಿದ್ದು, ಈ ನಿಟ್ಟಿನಲ್ಲಿ ಆಯೋಜಿಸುತ್ತಿರುವ ಕುಸ್ತಿ ಪಂದ್ಯಾವಳಿಗಳನ್ನು ಜನ ಪ್ರೋತ್ಸಾಹಿಸಬೇಕಿದೆ ಎಂದರು.

ವಿದ್ಯಾರ್ಥಿಗಳಿಗೆ ಉಚಿತ ತರಬೇತಿ: ಪಾರಂಪರಿಕ ಕ್ರೀಡೆಯಾದ ಕುಸ್ತಿಯನ್ನು ಜನಪ್ರಿಯಗೊಳಿಸಲು ಹಾಗೂ ಇಂದಿನ ಪೀಳಿಗೆಗೆ ಕುಸ್ತಿ ಕಲಿಸುವ ಸಲುವಾಗಿ ತಾಲೂಕಿನ ಗರಡಿ ಮನೆಗಳ ಸಹಕಾರದೊಂದಿಗೆ ದೊಡ್ಡಬಳ್ಳಾಪುರ ತಾಲೂಕು ಕುಸ್ತಿ ಸಂಘ ಸ್ಥಾಪಿಸಲಾಗಿದ್ದು, ದಶಕಗಳಿಂದ ಕುಸ್ತಿ ಕಲೆಗೆ ತಾಲೂಕು ಹೆಸರುವಾಸಿಯಾಗಿದೆ. ಮೈಸೂರಿನಲ್ಲಿ ನಡೆಯುವ ಕುಸ್ತಿ ಪಂದ್ಯಾವಳಿಗಳಲ್ಲಿ ಇಲ್ಲಿನ ಕುಸ್ತಿ ಪಟುಗಳು ಭಾಗವಹಿಸಿ ಬಹುಮಾನ ಗಳಿಸಿದ್ದಾರೆ. ಈಗ ಜಿಲ್ಲಾಮಟ್ಟದ ಪಂದ್ಯಾವಳಿ ನಡೆಸಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಅಲ್ಲದೇ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಕುಸ್ತಿ ತರಬೇತಿ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ್ ತಿಳಿಸಿದರು.

9 ಜಿಲ್ಲೆಗಳಿಂದ ಕ್ರೀಡಾಪಟುಗಳ ಆಹ್ವಾನ: ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಕುಸ್ತಿ ಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಕುಸ್ತಿ ಪಂದ್ಯಾವಳಿಗಳು ಸಾಂಪ್ರದಾಯಿಕ ಮಣ್ಣಿನ ಅಖಾಡದಲ್ಲಿ ನಡೆಯಲಿದ್ದು, ಪಂದ್ಯಾವಳಿಗಳನ್ನು ಅಂತಾರಾಷ್ಟ್ರೀಯ ನಿಯಮಗಳನುಸಾರ, ಅಂಕಗಳ ಆಧಾರದಲ್ಲಿ ಆಯೋಜಿಸಲಾಗುವುದು. ಕುಸ್ತಿ ಪಟುಗಳಿಗೆ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ. 99643 35160, 90361 83498ಗೆ ಸಂಪರ್ಕಿಸಬಹುದಾಗಿದೆ ಎಂದರು.