ಹಾಸನ: ದೇಶದಲ್ಲಿ ನಾಳೀಯ ಕಾಯಿಲೆಗಳಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆ ಹೆಚ್ಚುತ್ತಿದ್ದು, ತಕ್ಷಣವೇ ಗಮನಹರಿಸಬೇಕು. ಇಲ್ಲದಿದ್ದರೆ ಹಲವು ರೀತಿಯ ಗಂಭೀರ ಪರಿಸ್ಥಿತಿ, ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಬೆಂಗಳೂರಿನ ಯಶವಂತಪುರ ಮಣಿಪಾಲ ಆಸ್ಪತ್ರೆಯ ಸೀನಿಯರ್ ಕನ್ಸಲೆಂಟ್, ವಾಸ್ಕ್ಯುಲರ್ ಮತ್ತು ಎಂಡೋವಾಸ್ಕ್ಯುಲರ್ ಸರ್ಜರಿ ವೈದ್ಯಕೀಯ ತಜ್ಞ ಡಾ.ರಾಜೇಂದ್ರ ಪ್ರಸಾದ್ ತಿಳಿಸಿದರು.
ನಾಳೀಯ ಕಾಯಿಲೆಗಳಿಗೆ ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ. ನಾಳೀಯ ರೋಗ ದೇಶದಲ್ಲಿ ಬೆಳೆಯುತ್ತಿರುವ ಗಂಭೀರ ಆರೋಗ್ಯ ಸಮಸ್ಯೆ ಆಗಿವೆ. ಡಯಾಬಿಟಿಕ್ ಫೂಟ್: ಇದು ಸೋಂಕುಗಳು, ಹುಣ್ಣುಗಳು ಮತ್ತು ಅಂಗಚ್ಛೇದನೆಗಳನ್ನು ಉಂಟುಮಾಡುವ ಮಧು ಮೇಹದ ಸಾಮಾನ್ಯ ಮತ್ತು ಗಂಭೀರ ತೊಡಕಾಗಿದೆ. ರಕ್ತದ ಹರಿವನ್ನು ಪುನಃ ಸ್ಥಾಪಿಸಲು ಆರಂಭಿಕ ಹಂತದ ಪತ್ತೆ ಮತ್ತು ತ್ವರಿತ ಚಿಕಿತ್ಸೆ ಅಂಗವನ್ನು ಕಳೆದುಕೊಳ್ಳುವುದನ್ನು ತಪ್ಪಿಸಲು ನಿರ್ಣಾಯಕವಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವೆರಿಕೋಸ್ ವೆಯಿನ್ಸ್: ಇದು ಸಾಮಾನ್ಯವಾಗಿ ಕಾಸ್ಮೆಟಿಕ್ ಸಮಸ್ಯೆಯಾಗಿ ಕಂಡುಬಂದರೂ, ಚಿಕಿತ್ಸೆ ನೀಡದ ಉಬ್ಬಿರುವ ರಕ್ತನಾಳಗಳು ಸಿರೆಯ ಹುಣ್ಣುಗಳು ಮತ್ತು ಕಡಿಮೆ ರಕ್ತದ ಹರಿವಿನಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಎಂಡೋವೆನಸ್ ಲೇಸರ್ ಅಬ್ರೇಶನ್ ನಂತಹ ಆರಂಭಿಕ ಚಿಕಿತ್ಸೆ ಈ ಅಪಾಯ ಕಡಿಮೆ ಮಾಡಬಹುದು ಮತ್ತು ಜೀವನದ ಗುಣಮಟ್ಟ ಸುಧಾರಿಸಬಹುದು ಎಂದರು.
ಡೀಪ್ ವೆಯಿನ್ ಥಂಬೋಸಿಸ್: ಇದಕ್ಕೆ ಚಿಕಿತ್ಸೆ ನೀಡದಿದ್ದಲ್ಲಿ ಪಲ್ಮನರಿ ಎಂಬಾಲಿಸಮ್‌ಗೆ ಕಾರಣವಾಗುವ ಗಂಭೀರ ಸ್ಥಿತಿಯಾಗಬಹುದು. ಆರಂಭಿಕ ಹಂತದ ಪತ್ತೆ ಮತ್ತು ಚಿಕಿತ್ಸೆ ಬಹಳ ಮುಖ್ಯ ಎಂದ ಅವರು, ಪೆರಿಫೆರಲ್ ವಾಸ್ಕುಲರ್ ಡಿಸೀಸ್ ಸ್ಥಿತಿಯು ತೋಳುಗಳು ಮತ್ತು ಕಾಲುಗಳಿಗೆ ಕಡಿಮೆ ರಕ್ತದ ಹರಿವಿನಿಂದ ಗುರುತಿಸಲಾಗುತ್ತದೆ. ಮತ್ತು ಹೃದಯ ಸಂಬಂಧಿ ಕಾಯಿಲೆಗೆ ಸಂಬಂಧಿಸಿದೆ. ಆರಂಭಿಕ ಚಿಕಿತ್ಸೆ, ಅಂಗವನ್ನು ಕಳೆದುಕೊಳ್ಳುವ ಗಂಭೀರ ಸಮಸ್ಯೆ ತಡೆಗಟ್ಟಲು ಸಹಾಯ ಮಾಡಿ, ಹೃದ್ರೋಗಕ್ಕೆ ಸಂಬಂಧಿಸಿದ ಅಪಾಯ ಕಡಿಮೆ ಮಾಡುತ್ತದೆ ಎಂದು ಹೇಳಿದರು.
ಧೂಮಪಾನ, ಅನಿಯಂತ್ರಿತ ಮಧುಮೇಹ ಮತ್ತು ಅಥೆರೋಸ್ಕ್ಲೆರೋಸಿಸ್ ಪಿವಿಡಿಗಳಿಗೆ ಪ್ರಮುಖ ಕಾರಣಗಳಾಗಿವೆ, ವಿಶೇಷವಾಗಿ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಬರುತ್ತದೆ. ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮ ಎಂದು ಹೇಳಿದರು. ಆರೋಗ್ಯಕರ ಜೀವನ ಶೈಲಿ ಅನುಕರಣೆ ಮಾಡಬೇಕು. ಮಕ್ಕಳ ತುರ್ತು ಸ್ಥಿತಿಗಳಲ್ಲಿ ಸಮಯೋಚಿತ ಚಿಕಿತ್ಸೆ ನಿರ್ಣಾಯಕ, ವಿಳಂಬ ನಡೆ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಮಗುವಿಗೆ ಉಸಿರಾಟದ ತೊಂದರೆ, ನಿರಂತರ ವಾಂತಿ, ಮೂರ್ಛೆ ಅಥವಾ ಅಸಾಮಾನ್ಯ ನಡವಳಿಕೆಯಂತಹ ಗಂಭೀರ ತೊಂದರೆಯ ರೋಗ ಲಕ್ಷಣಗಳು ಕಾಣಿಸಿಕೊಂಡರೆ ಪೋಷಕರು ಆ ಕೂಡಲೇ ತುರ್ತು ವೈದ್ಯಕೀಯ ಸಹಾಯ ಪಡೆಯಬೇಕು ಎಂದು ಸಲಹೆ ನೀಡಿದರು.
ಮಕ್ಕಳ ಆರೈಕೆಗೆ ವಿಶೇಷವಾದ, ಕುಟುಂಬ-ಕೇಂದ್ರಿತ ವಿಧಾನದ ಅಗತ್ಯವಿದೆ. ಮಕ್ಕಳ ಆರೋಗ್ಯದ ಬಗ್ಗೆ ಇರುವ ಎಲ್ಲಾ ರೀತಿಯ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಘಟಕ ಸ್ಥಾಪಿಸಲಾಗಿದೆ ಎಂದರು. ಪ್ರತಿ ತಿಂಗಳ 3ನೇ ಮಂಗಳವಾರ ಹಾಸನದ ಮಂಗಳಾ ಆಸ್ಪತ್ರೆಯಲ್ಲಿ ಬೆಳಗ್ಗೆ 10-12 ಗಂಟೆ, ಜನಪ್ರಿಯ ಆಸ್ಪತ್ರೆಯಲ್ಲಿ ಮಧ್ಯಾಹ್ನ 12-2 ಗಂಟೆಯವರೆಗೂ ಲಭ್ಯ ಇರುವುದಾಗಿ ತಿಳಿಸಿದರು.
ಡಾ. ನಂದಿತಾ ರತ್ನಂ, ರಾಜೇಂದ್ರ ಇದ್ದರು.