ಜಿಲ್ಲೆ

ನಾಲ್ವರು ವಿದ್ಯಾರ್ಥಿಗಳಿಗೆ ಲಾಪ್‍ಟಾಪ್ ಕೊಡುಗೆ

ಬೀದರ್: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 95ಕ್ಕೂ ಅಧಿಕ ಅಂಕ ಗಳಿಸಿದ ನಾಲ್ವರು ವಿದ್ಯಾರ್ಥಿಗಳಿಗೆ ಇಲ್ಲಿಯ ಸಪ್ತಗಿರಿ ಪದವಿಪೂರ್ವ ವಿಜ್ಞಾನ ಕಾಲೇಜು ಲಾಪ್‍ಟಾಪ್ ಕೊಡುಗೆಯಾಗಿ ನೀಡಿ ಪ್ರೋತ್ಸಾಹಿಸಿದೆ.
ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಂಗಮೇಶ ರಾಜಕುಮಾರ (ಶೇ 96), ರಕ್ಷಿತಾ ಗಣಪತಿ (ಶೇ 96), ಶಿವಾರೆಡ್ಡಿ ಗೋಪಾಲ ರೆಡ್ಡಿ (ಶೇ 95) ಹಾಗೂ ಭಾಗ್ಯಶ್ರೀ ದಶರಥ (ಶೇ 95) ಅವರನ್ನು ಸತ್ಕರಿಸಿ, ಲಾಪ್‍ಟಾಪ್ ನೀಡಲಾಯಿತು.
ನೀಟ್‍ನಲ್ಲಿ ಸಾಧನೆಗೈದ ಶಿವಾರೆಡ್ಡಿ ಗೋಪಾಲ್‍ರೆಡ್ಡಿ (7,800ನೇ ರ್ಯಾಂಕ್), ಮನೀಶ್ ಶೇಷಪ್ಪ (8,212ನೇ ರ್ಯಾಂಕ್), ನಾಗೇಶ ಮಲ್ಲಿಕಾರ್ಜುನ (12,000 ರ್ಯಾಂಕ್), ಸಹನಾ ಶಿವರಾಜ (15,000 ರ್ಯಾಂಕ್), ಭಾಗ್ಯಶ್ರೀ ದಶರಥ, ಅಜಯ್ ರಮೇಶ, ಬಸವಾದಿತ್ಯ ಗಣಪತಿ, ವಿಶ್ವನಾಥ ಬಸವರಾಜ, ಪಲ್ಲವಿ ವಿಠ್ಠಲ, ಅಶ್ವಿನಿ ಮಾಣಿಕ, ಜೆಇಇ ಮೇನ್ಸ್‍ನಲ್ಲಿ 306ನೇ ರ್ಯಾಂಕ್ ಗಳಿಸಿ ಔರಂಗಾಬಾದ್‍ನ ಎನ್.ಐ.ಟಿಯಲ್ಲಿ ಸ್ಥಾನ ಪಡೆದ ಅಭಿಜೀತ್ ರವಿ ಅವರನ್ನು ಸನ್ಮಾನಿಸಲಾಯಿತು.
ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಲೇಜಿಗೆ ಶೇ 99 ರಷ್ಟು ಫಲಿತಾಂಶ ಲಭಿಸಿದೆ. 30 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 10 ವಿದ್ಯಾರ್ಥಿಗಳು ನೀಟ್‍ನಲ್ಲಿ ಉತ್ತಮ ರ್ಯಾಂಕ್ ಗಳಿಸಿ ವೈದ್ಯಕೀಯ ಕೋರ್ಸ್‍ಗೆ ಅರ್ಹತೆ ಗಳಿಸಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಸಾಧಕ ವಿದ್ಯಾರ್ಥಿಗಳಿಗೆ ಲಾಪ್‍ಟಾಪ್ ವಿತರಿಸಿ ಪ್ರೋತ್ಸಾಹಿಸಲಾಗಿದೆ ಎಂದು ಪ್ರಾಚಾರ್ಯ ಗೋವಿಂದ ಡಿ. ತಾಂದಳೆ ಹೇಳಿದರು.
ಜನಸೇವಾ ಶಾಲೆಯ ಆಡಳಿತಾಧಿಕಾರಿ ಸೌಭಾಗ್ಯವತಿ, ಡಾ. ಬಿ.ಆರ್. ಅಂಬೇಡ್ಕರ್ ಕಾಲೇಜು ಉಪನ್ಯಾಸಕ ಮನೋಜಕುಮಾರ, ಎಸ್.ವಿ.ಇ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ ಡಿ. ತಾಂದಳೆ ಮಾತನಾಡಿದರು.
ಜೀವಶಾಸ್ತ್ರ ಉಪನ್ಯಾಸಕ ಜಿ. ಅನಿಲಕುಮಾರ ನಿರೂಪಿಸಿದರು. ಉಪನ್ಯಾಸಕಿ ಪ್ರಾಜಕ್ತಾ ವಂದಿಸಿದರು.