ಹನೂರು: 17 ಜನರ ಸಾವು ಹಾಗೂ 150ಕ್ಕೂ ಹೆಚ್ಚು ಜನರ ಅಸ್ವಸ್ಥತೆಗೆ ಕಾರಣರಾದ ಜೈಲಿನಲ್ಲಿರುವ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಿ ಸಂತ್ರಸ್ಥರಿಗೆ ನ್ಯಾಯ ಒದಗಿಸಬೇಕು ಎಂದು ಸಮಾಜ ಸೇವಕ ಪಿ.ಜಿ.ಮಣಿ ಒತ್ತಾಯಿಸಿದರು.
ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿ ಸುಳವಾಡಿ ವಿಷ ಪ್ರಸಾದ ಸೇವನೆ ದುರಂತದಲ್ಲಿ ಮೃತಪಟ್ಟವರಿಗೆ ಶನಿವಾರ ಆಯೋಜಿಸಿದ್ದ 6ನೇ ವರ್ಷದ ಶ್ರದ್ಧಾಂಜಲಿ ಸಭೆಯಲ್ಲಿ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಈ ದುರಂತ ಘಟನೆಯಲ್ಲಿ 17 ಜನ ಅಮಾಯಕರು ಬಲಿಯಾದರು. 150ಕ್ಕೂ ಜನರು ಅಸ್ವಸ್ಥರಾಗಿದ್ದು, ಇಂದಿಗೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಸ್ಪತ್ರೆಗೆ ಅಲೆಯುವಂತಾಗಿದೆ. ಹಾಗಾಗಿ ಇವರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಇದಕ್ಕೆ ಕಾರಣರಾದ ನಾಲ್ವರು ಜೈಲಿನಲ್ಲಿದ್ದು, ನ್ಯಾಯಾಲಯದಲ್ಲಿ ಸಾಕ್ಷಿಗಳ ವಿಚಾರಣೆ ಕಳೆದ 6 ವರ್ಷಗಳಿಂದಲೂ ನಡೆಯುತ್ತಲೇ ಇದೆ. ಈ ಪ್ರಕರಣದಲ್ಲಿ ಸುಮಾರು 500ಕ್ಕೂ ಹೆಚ್ಚು ಸಾಕ್ಷಿಗಳಿದ್ದು, ವಿಚಾರಣೆಯಲ್ಲಿ ವಿಳಂಬವಾಗುತ್ತಿದೆ. ಆದ್ದರಿಂದ ಈ ಸಂಬಂಧ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಿ ವಿಚಾರಣೆಯನ್ನು ಶೀಘ್ರ ಪೂರ್ಣಗೊಳಿಸುವ ಮೂಲಕ ತಪ್ಪಿತಸ್ಥರಿಗೆ ಮರಣದಂಡನೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಸಮಿತಿ ರಚಿಸಿ ನ್ಯಾಯ ಒದಗಿಸಿ: ಈ ದುರಂತ ಘಟನೆಯಿಂದ ಸಂತ್ರಸ್ಥರಾದ ಕುಟುಂಬಗಳಿಗೆ ಸರ್ಕಾರ 2 ಎಕರೆ ಜಮೀನು, ನಿವೇಶನ ಹಾಗೂ ಇತರ ಪರಿಹಾರದ ಭರವಸೆ ನೀಡಿತ್ತು. ಆದರೆ ಈವರೆಗೂ ಈಡೇರಿಲ್ಲ. ಇದರಿಂದ ಸಂತ್ರಸ್ಥರ ಕುಟುಂಬಗಳ ಜೀವನದ ಸ್ಥಿತಿಗತಿ ಹೇಳತೀರದ್ದಾಗಿದೆ. ಪರಿಹಾರಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ತುಂಬಾ ಬೇಸತ್ತಿದ್ದೇವೆ. ಆದ್ದರಿಂದ ಇನ್ನು ಮುಂದೆ ಯಾವುದೇ ಕಾರಣಕ್ಕೂ ಅರ್ಜಿ ಸಲ್ಲಿಸುವುದೇ ಇಲ್ಲ. ಆದ್ದರಿಂದ ಸಮಾಜ ಕಲ್ಯಾಣ ಸಚಿವರು ಹಾಗೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಂತ್ರಸ್ಥರ ಸಮಿತಿ ರಚಿಸಿ ಅವರೊಂದಿಗೆ ಸಮಸ್ಯೆಗಳನ್ನು ಬಗ್ಗೆ ಚರ್ಚಿಸಿ ಸಮಾಲೋಚಿಸಿ ಪರಿಹಾರ ದೊರಕಿಸಿ ಕೊಡುವ ಮೂಲಕ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಬೆಂಬಲವಾಗಿ ನಿಲ್ಲುತ್ತೇವೆ: ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು ಮಾತನಾಡಿ, ಸಂತ್ರಸ್ಥರಿಗೆ ಸರ್ಕಾರ ನೀಡಿದ್ದ ಭರವಸೆಗಳನ್ನು ಈಡೇರಿಸುವಂತೆ ನಡೆದ ಎಸ್ಸಿ, ಎಸ್ಟಿ ಸಭೆಯಲ್ಲಿ ಒತ್ತಾಯಿಸಲಾಗಿದ್ದು, ನಿಮ್ಮ ಸಮಸ್ಯೆಗೆ ಸಂಘಟನೆ ಬೆಂಬಲವಾಗಿ ನಿಲ್ಲುತ್ತೇವೆ. ಇನ್ನು ಇದೀಗ ಸಮಾಜ ಕಲ್ಯಾಣ ಇಲಾಖೆಯಿಂದ ಹಾಸ್ಟೆಲ್ ವಾರ್ಡನ್ ಹುದ್ದೆ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಆದ್ದರಿಂದ ಸಂತ್ರಸ್ಥರ ಕುಟುಂಬದಲ್ಲಿನ ವಿದ್ಯಾವಂತರು ಅರ್ಜಿ ಸಲ್ಲಿಸಿದರೆ ಉದ್ಯೋಗ ದೊರಕಿಸಿ ಕೊಡಲು ಹೋರಾಟ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಅವರನ್ನು ಹೊರಗಡೆ ಬಿಟ್ರೆ ನಾವೆಲ್ಲಾ ಸಾಯ್ತೀವಿ: ಎಂ.ಜಿ.ದೊಡ್ಡಿ ಗ್ರಾಮದ ಶೋಭಾ ಮಾತನಾಡಿ, ಘಟನೆಯಿಂದ 125 ಜನರು ಅನಾರೋಗ್ಯದಿಂದ ಬಳಲುತ್ತಿದ್ದೇವೆ. ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಜೈಲಿನಿಂದ ಬಿಡುಗಡೆಯಾಗುತ್ತಾರೆ ಎಂದು ಹೇಳಲಾಗುತ್ತಿದೆ. ಅವರೇನಾದರೂ ಹೊರಗಡೆ ಬಂದ್ರೆ ಸಂತ್ರಸ್ಥರಾಗಿರುವ 125 ಜನನೂ ಸಾಯ್ತೀವಿ. ನಾವು ಸತ್ತ ಮೇಲೆ ಅವರನ್ನು ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮಗೆ ಪರಿಹಾರ ಕೊಡ್ತೀರೋ ಬಿಡ್ತೀರೋ ಮೊದಲು ಅಗತ್ಯ ಚಿಕಿತ್ಸೆ ಕೊಡಿಸಿ ಬದುಕಲು ಸಹಾಯ ಮಾಡಿ. ಇಲ್ಲವಾದಲ್ಲಿ ಸಿಎಂ ಮನೆಗೆ ತೆರಳಿ ಸಮಸ್ಯೆ ತಿಳಿಸಲಾಗುವುದು ಎಂದರು.
ಬಳಿಕ ಸಭೆಯಲ್ಲಿ ಬಹುತೇಕ ಸಂತ್ರಸ್ಥರು ತಮ್ಮ ಸಮಸ್ಯೆಯನ್ನು ಪರಿಪರಿಯಾಗಿ ಹೇಳಿಕೊಂಡು ಬಗೆಹರಿಸುವಂತೆ ಒತ್ತಾಯಿಸಿದರು.
ಗ್ರಾಪಂ ಅಧ್ಯಕ್ಷ ಇಗ್ನೇಷಿ ಮುತ್ತು, ದಸಂಸ ಸಂಚಾಲಕ ನಾಗರಾಜು, ಮುಖಂಡರಾದ ರಾಮಲಿಂಗಂ, ಗೋವಿಂದರಾಜು, ಮುನಿಸ್ವಾಮಿನಾಯ್ಕ, ರಾಜುಗೌಂಡರ್, ಅಣ್ಣಾಮಲೈ, ಶಿವಣ್ಣ, ಮುರುಗೇಶ್, ಶಿವು ಮತ್ತಿತರರು ಹಾಜರಿದ್ದರು.