ಮುಂಡಗೋಡ: ತಾಲೂಕಿನ ಚಿಗಳ್ಳಿ, ಬಾಚಣಕಿ ಗ್ರಾಮಗಳು ಸೇರಿ ಶ್ರೀಗಂಧದ 4 ಮರಗಳನ್ನು ಕಳ್ಳರು ಕಡಿದುಕೊಂಡು ಹೋದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಚಿಗಳ್ಳಿ ಗ್ರಾಮದ ಫಕೀರಪ್ಪ ಹರಿಜನ ಅವರ ಮನೆ ಹಿತ್ತಲಿನಲ್ಲಿನ ಒಂದು, ಉಪಾಸಗೇರಿ ಓಣಿಯ ಝುಂಡೇಕಟ್ಟಿ ಬಳಿಯ ಒಂದು, ಉಲ್ಲಾಸ ಕುಲಕರ್ಣಿ ಅವರ ಮನೆ ಆವರಣದಲ್ಲಿದ್ದ ಒಂದು ಸೇರಿ 3 ಶ್ರೀಗಂಧ ಮರಗಳನ್ನು ಕಡಿದುಕೊಂಡು ಹೋಗಿದ್ದು, ಟೊಂಗೆಗಳನ್ನು ಅಲ್ಲೇ ಬಿಡಲಾಗಿದೆ.
ಬಾಚಣಕಿ ಗ್ರಾಮದ ಯಲ್ಲಪ್ಪ ಕರಡಿ ಅವರ ಮನೆ ಮುಂಭಾಗಲ್ಲಿದ್ದ ಒಂದು ಶ್ರೀಗಂಧ ಮರ ಕಡಿಯಲಾಗಿದೆ. ಮನೆಯಿಂದ ಸ್ವಲ್ಪ ದೂರದಲ್ಲಿ ಟೊಂಗೆಗಳನ್ನು ಬೇರ್ಪಡಿಸುತ್ತಿದ್ದಾಗ ಶಿವಪ್ಪ ಗುಂಜಾಳ, ರಾಜು ಹೊತಗಣ್ಣವರ ಬೆನ್ನು ಹತ್ತಿದ್ದಾರೆ. ಆಗ ನಾಲ್ವರು ಕಳ್ಳರು ಶ್ರೀಗಂಧದ ಕಟ್ಟಿಗೆ ಸಮೇತ ಪರಾರಿಯಾಗಿದ್ದಾರೆ. ಬಾಚಣಕಿ ಗ್ರಾಮದ ಶ್ರೀಪಾದ ಪಾಯಣ್ಣನವರ ಮನೆ ಹಿತ್ತಲಿನಲ್ಲಿದ್ದ 15 ಶ್ರೀಗಂಧದ ಮರಗಳ ಪೈಕಿ 9 ಗಿಡಗಳಿಗೆ ಕಚ್ಚು ಹಾಕಿ ಎಳೆಯ ಮರವೆಂಬ ಕಾರಣಕ್ಕೆ ಬಿಟ್ಟು ಹೋಗಿದ್ದಾರೆ.
ಉಪವಲಯ ಅರಣ್ಯಾಧಿಕಾರಿ ಬಸವರಾಜ ಪೂಜಾರ, ಸಿಬ್ಬಂದಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.