ಕೊಪ್ಪಳ: ತೋಟಗಾರಿಕೆ ಇಲಾಖೆಯಿಂದ ನಗರ ಜಿಲ್ಲಾ ತೋಟಗಾರಿಕೆ ಕಚೇರಿ ಆವರಣದಲ್ಲಿ ಆ.15ರಿಂದ 20ವರೆಗೆ ಹಮ್ಮಿಕೊಂಡಿದ್ದ ಸಸ್ಯಸಂತೆ ತೆರೆ ಕಂಡಿದ್ದು, 4 ಲಕ್ಷಕ್ಕೂ ಅಧಿಕ ಸಸಿಗಳು ಮಾರಾಟವಾಗಿವೆ. ಸುಮಾರು 10,500ರೈತರ ಭೇಟಿ ನೀಡಿ ತೋಟಗಾರಿಕೆ ಮಾಹಿತಿ ಪಡೆದಿದ್ದಾರೆ.
ಕಳೆದ 6 ವರ್ಷಗಳಿಂದ ನಿರಂತರವಾಗಿ ಸಸ್ಯ ಸಂತೆ ಆಯೋಜಿಸಲಾಗುತ್ತಿದೆ. ಪ್ರತಿ ಬಾರಿ ವಿನೂತನವಾಗಿ ಹಮ್ಮಿಕೊಳ್ಳುತ್ತಿದ್ದು, ಈ ಬಾರಿ ಸಂತೆಯಲ್ಲಿ ಜಗತ್ತಿನ ದುಬಾರಿ ಮಾವು ಎಂದು ಖ್ಯಾತಿಯಾದ ಮಿಕಾಜಾಕಿ ಹಾಗೂ ಮೆಕಾಡೊಮಿಯಾ ಹಣ್ಣಿನ ಸಸಿ ಪ್ರದರ್ಶನ ಮಾಡಲಾಗಿದೆ. ಸಸಿ ನೋಡಲು ಜಿಲ್ಲೆ ಅಷ್ಟೇ ಅಲ್ಲದೆ ಹೊರ ಜಿಲ್ಲೆಗಳಿಂದ ಹಲವು ರೈತರು ಆಗಮಿಸಿದ್ದು, ಸಸಿಗಾಗಿ ಬೇಡಿಕೆ ಸಲ್ಲಿಸಿದ್ದಾರೆ. ಹೂ, ಹಣ್ಣು, ಔಷಧ, ಅಲಂಕಾರಿಕಾ, ತರಕಾರಿ ಸೇರಿ 4 ಲಕ್ಷಕ್ಕೂ ಅಧಿಕ ಸಸಿಗಳು ಮಾರಾಟವಾಗಿವೆ. ಜತೆಗೆ ರೈತರು 20 ಲಕ್ಷ ಸಸಿಗಳಿಗೆ ಬೇಡಿಕೆ ಸಲ್ಲಿಸಿರುವುದು ವಿಶೇಷ.
ತೋಟಗಾರಿಕೆ ಕ್ಷೇತ್ರದಲ್ಲಿ ಉತ್ಪಾದಿಸಿದ 5 ಟನ್ ಎರೆಹುಳು ಗೊಬ್ಬರ, 2ಸಾವಿರ ಲೀಟರ್ ಎರೆ ಜಲ, 5ಸಾವಿರ ಕೆ.ಜಿ.ಬೇವಿನ ಪುಡಿ, 200 ಕೆ.ಜಿ. ಜೈವಿಕ ಪರಿಕರಗಳು ಮಾರಾಟವಾಗಿವೆ. ಇದರೊಂದಿಗೆ ರೈತರಿಗೆ ನೀಮಾಸ್ತ್ರ, ಬ್ರಹ್ಮಾಸ್ತ್ರ, ಗೋಕೃಪಾಮೃತ, ಹೂಮಿಕ್ ಅಸಿಡ್, ಅಗ್ನಿ ಅಸ್ತ್ರ ತಯಾರಿಕೆ ಕುರಿತು ರೈತರಿಗೆ ಮಾಹಿತಿ ನೀಡಲಾಗಿದೆ. ತೋಟಗಾರಿಕೆ ಬೆಳೆಗಳಿಗೆ ಬ್ಯಾಂಕ್ ಲೋನ್ ಪಡೆವ ಬಗ್ಗೆ ಅರಿವು ಮೂಡಿಸಿದ್ದು, 3ಎಫ್ ತಾಳೆ ಬೆಳೆಗೆ ಪ್ರೋತ್ಸಾಹ ನೀಡುವ ಕುರಿತು 1,200 ರೈತರಿಗೆ ಮಾಹಿತಿ ಒದಗಿಸಲಾಗಿದೆ. ರಿಲೇಯೇಬಲ್ ಆರ್ಗ್ಯಾನಿಕ್ಸ್ ಕಂಪನಿಯಿಂದ ರೈತರಿಗೆ ಸಾವಯವ ಪದ್ಧತಿ ಅಳವಡಿಕೆ ಮತ್ತು ಪ್ರಮಾಣ ಪತ್ರ ಪಡೆವ ಬಗ್ಗೆ ಅರಿವು ಮೂಡಿಸಿದ್ದು ಮೇಳ ಯಶಸ್ಸು ಕಾಣುವಂತಾಗಿದೆ.