ಜಿಲ್ಲೆ

ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ, ಬೀದರ್​ ಜಿಲ್ಲಾದ್ಯಂತ ಕೇಸರಿಪಡೆ ವಿಜಯೋತ್ಸವ

ಬೀದರ್: ಉತ್ತರಪ್ರದೇಶ, ಉತ್ತರಾಖಂಡ, ಮಣಿಪುರ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದ ಹಾಗೂ ಗೋವಾದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಹಿನ್ನೆಲೆಯಲ್ಲಿ ಗುರುವಾರ ನಗರ ಸೇರಿ ಜಿಲ್ಲಾದ್ಯಂತ ಪಕ್ಷದ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ನಡೆಸಿದರು.

ಪಂಚರಾಜ್ಯಗಳಲ್ಲಿ ನಾಲ್ಕು ಕಡೆ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ. ಉತ್ತರಪ್ರದೇಶ ಲಿತಾಂಶದ ಮೇಲೆ ಎಲ್ಲರ ದೃಷ್ಟಿ ನೆಟ್ಟಿತ್ತು. ಇಲ್ಲಿ ನಿಚ್ಚಳ ಬಹುಮತ ಸಿಕ್ಕಿರುವುದು ಪಕ್ಷದ ಸಂಭ್ರಮ ಇಮ್ಮಡಿಗೊಳಿಸಿತು.

ಪಕ್ಷದ ಜಿಲ್ಲಾ ಕಚೇರಿ ಎದುರು ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಘೋಷಣೆ ಕೂಗುತ್ತ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಮೋದಿ, ಯೋಗಿ ಪರ ಜೈಕಾರ ಮೊಳಗಿದವು. ಈ ಲಿತಾಂಶ ದೇಶದಲ್ಲಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಶಕ್ತಿ ಸಾಬೀತುಪಡಿಸಿದೆ. ದೇಶದ ಜನತೆ ಬಿಜೆಪಿ ಮತ್ತು ಅಭಿವೃದ್ಧಿ ಜತೆಗಿದ್ದಾರೆ ಎಂಬುದಕ್ಕೂ ಸಾಕ್ಷಿಯಾಗಿದೆ ಎಂದು ಮುಖಂಡರು ಹೇಳಿದರು.

ಉತ್ತರಪ್ರದೇಶ, ಉತ್ತರಾಖಂಡದಲ್ಲಿ ಬಿಜೆಪಿಗೆ ಸಿಕ್ಕ ಭರ್ಜರಿ ಜಯ ವಿರೋಧಿಗಳಲ್ಲಿ ನಡುಕ ಹುಟ್ಟಿಸಿದೆ. ಅಖಿಲೇಶ್ ಯಾದವ್, ರಾಹುಲ್ ಗಾಂಧಿ ಪಕ್ಷಗಳು ಬಿಜೆಪಿ ಮತ್ತು ಮೋದಿ-ಯೋಗಿ ಹವಾದಲ್ಲಿ ಧೂಳಿಪಟವಾಗಿವೆ. ದೇಶದ ಹಿತ, ಅಭಿವೃದ್ಧಿ ಬಗ್ಗೆ ಚಿಂತನೆ ಮಾಡದವರಿಗೆ ಅಧಿಕಾರದಲ್ಲಿ ಜಾಗವಿಲ್ಲ ಎಂಬುದನ್ನು ಈ ಲಿತಾಂಶ ತೋರಿಸಿಕೊಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿದರು.

ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್, ಮಾಜಿ ಜಿಲ್ಲಾಧ್ಯಕ್ಷ ಎನ್.ಆರ್. ವರ್ಮಾ, ಪ್ರಮುಖರಾದ ರೇವಣಸಿದ್ದಪ್ಪ ಜಲಾದೆ, ಜಯಕುಮಾರ ಕಾಂಗೆ, ರಾಜಕುಮಾರ ಚಿದ್ರಿ, ಹಣಮಂತ ಬುಳ್ಳಾ, ಮಹೇಶ್ವರ ಸ್ವಾಮಿ, ಸುಭಾಷ ಮಡಿವಾಳ, ಪ್ರಸನ್ನ ಲಕ್ಷ್ಮೀ ದೇಶಪಾಂಡೆ, ಶೋಭಾವತಿ, ಉಪೇಂದ್ರ ದೇಶಪಾಂಡೆ, ಮಹೇಶ ಪಾಲಂ, ರಾಜಕುಮಾರ ನೆಮತಾಬಾದೆ ಇತರರಿದ್ದರು.