ಬಸವಕಲ್ಯಾಣ: ಇಲ್ಲಿಯ ಸಿವಿಲ್ ನ್ಯಾಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಬೃಹತ್ ಲೋಕ ಅದಾಲತ್‌ನಲ್ಲಿ ಕಾರಣಾಂತರದಿಂದ ದೂರವಾಗಿದ್ದ ನಾಲ್ಕು ಜೋಡಿಗಳನ್ನು ಒಂದುಗೂಡಿಸಲಾಯಿತು.
ನ್ಯಾಯಾಧೀಶರ ಸಮ್ಮುಖದಲ್ಲಿ ನಾಲ್ವರು ದಂಪತಿ ಪರಸ್ಪರ ಹೂಮಾಲೆ ಹಾಕಿಕೊಂಡು ಸಿಹಿ ತಿನ್ನಿಸಿ ಸಂಭ್ರಮಿಸಿದರು. ಭಿನ್ನಾಭಿಪ್ರಾಯ, ವೈಮನಸ್ಸು ಮತ್ತಿತರ ಕಾರಣದಿಂದ ದೂರಾಗಿದ್ದ ದಂಪತಿ ರಾಜಿ ಸಂಧಾನ ಮೂಲಕ ಒಂದಾಗಿ ಹಳೆಯ ಕಹಿ ನೆನಪುಗಳೆಲ್ಲ ಮರೆತು ಜತೆಯಾಗಿ ಹೆಜ್ಜೆ ಹಾಕಿದರು. ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಘವೇಂದ್ರ ಎಸ್.ಚನ್ನಬಸಪ್ಪನವರ್ ಅವರು ದಂಪತಿಗೆ ಬುದ್ಧಿವಾದ ಹೇಳಿ ಶುಭ ಹಾರೈಸಿದರು.
ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದಲ್ಲಿನ ಎರಡು ಹಾಗೂ ಸಿವಿಲ್ ನ್ಯಾಯಾಲಯದಲ್ಲಿನ ಎರಡು ಸೇರಿ ನಾಲ್ಕು ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.
ಎರಡು ಪ್ರಕರಣಗಳನ್ನು ನ್ಯಾಯವಾದಿಗಳಾದ ಸುಧಾಕರ ಪಾಟೀಲ್, ಧರ್ಮಣ್ಣ ಚಾಂದೆ, ಇನ್ನೊಂದು ಪ್ರಕರಣದಲ್ಲಿ ವಿಠ್ಠಲ್ ಗಾಯಕವಾಡ ಮತ್ತು ಸಹದೇವ ಸೂರ್ಯವಂಶಿ, ಮತ್ತೊಂದು ಪ್ರಕರಣದಲ್ಲಿ ವಿ.ಜಿ. ವಟಗೆ, ಜಿ.ಎಸ್. ಕುರಕೋಟೆ ರಾಜಿ ಸಂಧಾನಕ್ಕೆ ಸಹಕರಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಚನ್ನಪ್ಪ, ಸಿವಿಲ್ ನ್ಯಾಯಾಧೀಶ ಜ್ಞಾನೇಶ್ವರ ಮಾಳಗೆ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಭೀಮಾಶಂಕರ ಕುರಕೋಟೆ, ಕಾರ್ಯದರ್ಶಿ ಎಸ್.ಬಿ. ಮಾಶಾಳಕರ್, ನ್ಯಾಯವಾದಿಗಳಾದ ಸಂಜುರಡ್ಡಿ, ಮಹಾನಂದ ಈರಣ್ಣ, ವಿವೇಕಾನಂದ ನಾಗರಾಳೆ, ಪ್ರವೀಣ ಚಾಳಕಾಪುರೆ, ರಾಜೇಶ ಗುರ್ಜರ, ಶಿವರಾಜ ಮೇತ್ರೆ ಇತರರಿದ್ದರು.
ಸುಪ್ರೀಂಕೋಟ್, ಹೈಕೋಟ್ ಮಾರ್ಗದರ್ಶನದಲ್ಲಿ ಮೂರು ತಿಂಗಳಿಗೊಮ್ಮ ಲೋಕ ಅದಾಲತ್ ಹಮ್ಮಿಕೊಳ್ಳಲಾಗುತ್ತಿದೆ. ಈ ಅದಾಲತ್‌ನಲ್ಲಿ ನಾಲ್ಕು ಜೋಡಿಗಳನ್ನು ಒಂದುಗೂಡಿಸಲಾಗಿದೆ. ಕೆಲ ವರ್ಷದಿಂದ ಬಾಕಿ ಇದ್ದ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ.
| ರಾಘವೇಂದ್ರ ಚನ್ನಬಸಪ್ಪನವರ್
ನ್ಯಾಯಾಧೀಶರು