ಜಿಲ್ಲೆ

ನಾಲ್ಕು ತಿಂಗಳಾದರೂ ಫಲಕೊಡದ ಮೆಣಸಿನಕಾಯಿ ಬೆಳೆ

ಹಾವೇರಿ: ತಾಲೂಕಿನ ಅಕ್ಕೂರ ಗ್ರಾಮದಲ್ಲಿ ಬೆಳೆದಿರುವ ಮೆಣಸಿನಕಾಯಿ ಬೆಳೆಯು ನಾಲ್ಕು ತಿಂಗಳಾದರೂ ಹೂ ಕಾಯಿ ಬಿಟ್ಟಿಲ್ಲ. ಬೀಜವೇ ಕಳಪೆಯಾಗಿದ್ದು, ಬೀಜ ವಿತರಿಸಿದ ಕಂಪನಿಯ ಮೇಲೆ ಕ್ರಮ ಕೈಗೊಂಡು ರೈತರಿಗೆ ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿ ಅಕ್ಕೂರ ಗ್ರಾಮದ ರೈತರು ತೋಟಗಾರಿಕೆ ಸಹಾಯಕ ನಿರ್ದೇಶಕರಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ.

ಅಕ್ಕೂರ ಗ್ರಾಮದಲ್ಲಿ ಹತ್ತಾರು ರೈತರು ನಾಲ್ಕು ತಿಂಗಳ ಹಿಂದೆ ಕಳಸಾ ಕಂಪನಿಯ ಎಫ್1-1227 ತಳಿಯ ಮೆಣಸಿನಕಾಯಿ ಬೀಜಗಳನ್ನು ಬಿತ್ತನೆ ಮಾಡಿದ್ದರು. ಇಲ್ಲಿಯವರೆಗೂ ಗಿಡ ಬೆಳೆದರೂ ಹೂ, ಕಾಯಿ ಬಿಡುತ್ತಿಲ್ಲ. ಇದರಿಂದ ಸಾವಿರಾರು ರೂ. ಖರ್ಚು ಮಾಡಿ ಈಗ ಬೆಳೆಯೂ ಇಲ್ಲದಂತಾಗಿದೆ. ಕೂಡಲೇ ಬೀಜ ವಿತರಿಸಿದ ಕಂಪನಿಯ ಮೇಲೆ ಕ್ರಮ ಕೈಗೊಂಡು ರೈತರಿಗೆ ಪರಿಹಾರ ವಿತರಿಸಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.

ಮನವಿ ಸಲ್ಲಿಸುವ ಸಮಯದಲ್ಲಿ ರೈತರಾದ ಯಲ್ಲನಗೌಡ ಮರಿಗೌಡ್ರ, ಹನುಮಂತಗೌಡ ಪಾಟೀಲ, ಹನುಮಂತಗೌಡ ಹೊಸಗೌಡ್ರ, ಸುಭಾಸ ಹೊಸಮನಿ, ಬಸನಗೌಡ ಹೊಸಗೌಡ್ರ, ಹನುಮಂತಪ್ಪ ಹೊಸಮನಿ, ಬಸನಗೌಡ ಮರಿಗೌಡ್ರ ಇತರರಿದ್ದರು.