ಕಂಪ್ಲಿ: ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಟಗಿ ನಾಲೆಗೆ ಸಮರ್ಪಕವಾಗಿ ನೀರು ಹರಿದು ಬರುತ್ತಿಲ್ಲ. ನೀರು ಸಿಗದೆ ಭತ್ತದ ಗದ್ದೆಗಳು ಒಣಗುತ್ತಿವೆ. ಈ ಹಿನ್ನೆಲೆಯಲ್ಲಿ ಆ.10ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಎಮ್ಮಿಗನೂರಿನ ನೀರು ಬಳಕೆದಾರರ ಸಂಘದ ಕಾರ್ಯದರ್ಶಿ ಅಡಿವೆಯ್ಯಸ್ವಾಮಿ ತಿಳಿಸಿದರು.
ಎಮ್ಮಿಗನೂರಿನಲ್ಲಿ ರೈತರ ಸಭೆಯಲ್ಲಿ ಭಾನುವಾರ ಮಾತನಾಡಿ, ಸೂಗೂರು ಡಿಸ್ಟ್ರಿಬ್ಯೂಟರ್ ಇಟಗಿ ನಾಲೆಗೆ 11 ಕ್ಯೂಸೆಕ್ ನೀರು ಹರಿಯಬೇಕಿದ್ದು ಕೇವಲ ಮೂರು ಕ್ಯೂಸೆಕ್ ಹರಿಯುತ್ತಿದೆ. ಈ ನಾಲೆಯಿಂದ 360 ಎಕರೆ ಜಮೀನಿಗೆ ನೀರು ದೊರೆಯಬೇಕಿದೆ. ನಾಲೆ ಮೇಲ್ಭಾಗದಲ್ಲಿ ಸೈಫಾನ್ ಪೈಪ್ ಹಾಗೂ ಅಂಡರ್ ಗ್ರೌಂಡ್ ಪೈಪ್‌ಗಳನ್ನು ಅಳವಡಿಸಿಕೊಂಡು ಅನಧಿಕೃತವಾಗಿ ನೀರು ಪಡೆಯಲಾಗುತ್ತಿದೆ. ಇದರಿಂದಾಗಿ ಅಚ್ಚುಕಟ್ಟು ರೈತರಿಗೆ ನೀರು ದೊರೆಯದಂತಾಗಿದೆ ಎಂದು ದೂರಿದರು.
ನಾಲೆಗೆ ನೀರು ಹರಿಯದೆ 60 ಎಕರೆ ಭತ್ತದ ಗದ್ದೆ ಒಣಗಿ 8ರಿಂದ 10 ರೈತರು ನಷ್ಟಕ್ಕೀಡಾಗಿದ್ದಾರೆ. ನೀರಾವರಿ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಆ.10ರಂದು ಸೂಗೂರು ವಿತರಣೆ ನಾಲೆಯ ತೂಬು ಮುಚ್ಚಿ ಪ್ರತಿಭಟನೆ ನಡೆಸಲಾಗುವುದು ಎಂದು ಅಡಿವೆಯ್ಯಸ್ವಾಮಿ ಎಚ್ಚರಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ನೀರಾವರಿ ನಿಗಮದ ಎಇಇ ಎ.ಶ್ರೀನಿವಾಸ್, ಸೂಗೂರು ವಿತರಣೆ ನಾಲೆಗೆ ಹಾಕಿರುವ ಸೈಫಾನ್ ಹಾಗೂ ಅಂಡರ್‌ಗ್ರೌಂಡ್ ಪೈಪ್‌ಗಳನ್ನು ತೆರವುಗೊಳಿಸಲಾಗುವುದು. ಇಟಗಿ ನಾಲೆಗೆ ಸಮರ್ಪಕ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.