ಜಿಲ್ಲೆ

ನಾಲೆಗಳಿಗೆ ನೀರು ಹರಿಸಲು ಒತ್ತಾಯಿಸಿ ಪ್ರತಿಭಟನೆ

ಕಿಕ್ಕೇರಿ: ಜನ-ಜಾನುವಾರುಗಳಿಗೆ ನೀರಿಲ್ಲದೆ ಪರಿತಪಿಸುವಂತಾಗಿದ್ದು ಕೂಡಲೇ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ರೈತರು ಕಿಕ್ಕೇರಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಎಚ್‌ಎಲ್‌ಬಿಸಿ ಕಚೇರಿ ಬಳಿ ಜಮಾಯಿಸಿದ ರೈತರು ಮಳೆಗಾಲ ಹೋಗಿದೆ. ಬರಗಾಲ ಬಂದಿದೆ. ಕನಿಷ್ಠ ಕೆರೆ-ಕಟ್ಟೆಗಳಿಗಾದರೂ ನೀರು ತುಂಬಿಸಿದರೆ ಬದುಕಿಕೊಳ್ಳುತ್ತೇವೆ. ಈಗಾಗಲೇ ಹಾಕಿದ ಪೈರು ಮೊಳಕೆಯಲ್ಲಿಯೇ ಬಾಡಿವೆ. ಹಲವು ಪೈರು ಆಗಿ ಒಣಗಿ ಬಿಸಿಲಿನ ಝಳಕ್ಕೆ ಸುಟ್ಟು ಹೋಗಿವೆ. ಮಾಡಿದ ಸಾಲ ಗಗನಕ್ಕೆ ಏರುವಂತಾಗಿದೆ. ಕನಿಷ್ಠ ಜಾನುವಾರುಗಳಿಗೆ ಮೇವು ಬೆಳೆಯಲಾದರೂ ನೀರು ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೇಮಾವತಿ ನಾಲೆಯ 47ನೇ ಹಂಚಿಕೆ ತೂಬಿನಿಂದ ನೀರು ಬಿಡಲು ಮುಂದಾಗಿ. ಈ ಮಾರ್ಗವಾಗಿ ಗುರುಗಾರನಹಳ್ಳಿಯಿಂದ ಆರಂಭವಾಗುವ ನಾಲೆ ನೀರು ಕೊನೆಯ ಹಂತಕ್ಕೆ ತಲುಪದಾಗಿದೆ. ಇದು ಪ್ರತಿ ವರ್ಷದ ಗೋಳಾಗಿದೆ. ಸಾಸಲು, ತುಳಸಿ, ಬಸವನಹಳ್ಳಿ, ಲಕ್ಷ್ಮೀಪುರ, ಉದ್ದಿನಮಲ್ಲನ ಹೊಸೂರು, ಗೋವಿಂದನಹಳ್ಳಿ, ಕೊಪ್ಪಲು, ಮಾರ್ಗೋನಹಳ್ಳಿವರೆಗೆ ನೀರು ಹರಿಯುವುದೇ ಇಲ್ಲ. ಕೂಡಲೇ ನಾಲೆ ಮೂಲಕ ನೀರು ಹರಿಸಿ. ಕೆರೆ-ಕಟ್ಟೆ ತುಂಬಿಸಲು ಅನುಕೂಲ ಮಾಡಿಕೊಡಿ ಎಂದರು.

ನೀರಾವರಿ ಇಲಾಖೆ ಎಇಇ ಚಂದ್ರೇಗೌಡ ಅವರು ರೈತರಿಂದ ಮನವಿ ಸ್ವೀಕರಿಸಿ ತ್ವರಿತವಾಗಿ ನಾಲೆ ಮೂಲಕ ನೀರು ಬಿಡುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಸ್ಥಗಿತಗೊಳಿಸಲಾಯಿತು. ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರೇಗೌಡ, ಗುಂಡ, ಕೆಂಪೇಗೌಡ, ಶಾಮಣ್ಣ ಮತ್ತಿತರರಿದ್ದರು.

ಜನ-ಜಾನುವಾರುಗಳಿಗೆ ನೀರಿಲ್ಲದೆ ಪರಿತಪಿಸುವಂತಾಗಿದ್ದು ಕೂಡಲೇ ನಾಲೆ ಮೂಲಕ ನೀರು ಹರಿಸುವಂತೆ ಒತ್ತಾಯಿಸಿ ರೈತರು ಕಿಕ್ಕೇರಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಚಂದ್ರೇಗೌಡ, ಗುಂಡ, ಕೆಂಪೇಗೌಡ, ಶಾಮಣ್ಣ ಮತ್ತಿತರರಿದ್ದರು.