ಬೆಳಗಾವಿ: ನಾಲಾ, ಚರಂಡಿ ಸ್ವಚ್ಛತೆ ಇಲ್ಲದಿರುವುದು, ವಿದ್ಯುತ್ ಕಂಬ, ಜೋತು ಬಿದ್ದ ತಂತಿ, ರಸ್ತೆ ಅಗೆದು ಬಿಟ್ಟಿರುವ ಕಾಮಗಾರಿಗಳ ಕುರಿತು ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ ಘಟನೆ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಬುಧವಾರ ನಡೆದ ಮಳೆಗಾಲದ ಪೂರ್ವ ತಯಾರಿಗಳ ಕುರಿತು ಕರೆದಿದ್ದ ವಿಶೇಷ ಸಭೆಯಲ್ಲಿ ನಡೆಯಿತು.
ಪಾಲಿಕೆ ಮೇಯರ್ ಮಂಗೇಶ ಪವಾರ ಮಾತನಾಡಿ, ಮಳೆಗಾಲ ಆರಂಭವಾಗುವ ಮೊದಲೇ ಒಳಚರಂಡಿ, ನಾಲಾ ಸ್ವಚ್ಛಗೊಳಿಸ ಬೇಕು. ಆರಂಭಗೊಂಡಿರುವ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಮಳೆ ನೀರು ಸರಾಗವಾಗಿ ಹರಿಯುವಂತೆ ಎಲ್ಲ ಚರಂಡಿ ಸ್ವಚ್ಛಗೊಳಿಸಿ. ಯಾವುದೇ ಪ್ರದೇಶದಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮನೆಗೆ ನುಗ್ಗುವ ನೀರು: ಸದಸ್ಯರಾದ ವೀಣಾ ವಿಜಾಪುರೆ, ಶ್ರೇಯಸ್ ನಾಕಾಡಿ, ರಿಯಾಜ್ ಕಿಲ್ಲೇದಾರ, ಗಿರೀಶ ದೊಂಗಡಿ ಮಾತನಾಡಿ, ಗಣೇಶ ನಗರದಲ್ಲಿ ಒಳಚರಂಡಿ ಕಾಮಗಾರಿಗೆ ಅನುಮೋದನೆ ನೀಡಿ ಎರಡು ವರ್ಷ ಕಳೆಯಿತು. ಇಲ್ಲಿಯವರೆಗೆ ಕಾಮಗಾರಿ ಕೈಗೊಂಡಿಲ್ಲ. ಪ್ರತಿವರ್ಷ ಮಳೆಗಾಲದಲ್ಲಿ 150 ಮನೆಗಳಿಗೆ ಮಳೆಗಾಲದಲ್ಲಿ ನೀರು ನುಗ್ಗುತ್ತವೆ. ಪಾಲಿಕೆ ಇಂಜಿನಿಯರ್‌ಗಳಿಗೆ ಸಮಸ್ಯೆ ಗೊತ್ತಿದ್ದರೂ ಕ್ರಮ ವಹಿಸುತ್ತಿಲ್ಲ. ನಗರದ ಸಾಯಿ ಸಭಾಂಗಣ ಬಳಿ ನಾಲಾ ಇತ್ತು. ಈಗ ಅದನ್ನು ಅತಿಕ್ರಮಣ ಮಾಡಿಕೊಳ್ಳಲಾಗಿದೆ. ಇದರಿಂದ ಮಳೆ ನೀರು ಮನೆಗೆ ನುಗ್ಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ದೂರಿದರು.
ಶೌಚ ಸಮಸ್ಯೆ ಬಗೆಹರಿಸಿ: ನಾಮನಿರ್ದೇಶಿತ ಸದಸ್ಯ ಮುಸ್ತಾಕ್ ಮಾತನಾಡಿ, ಆಶ್ರಯ ಕಾಲನಿಯಲ್ಲಿ ಶೌಚಕ್ಕೆ ಸೌಲಭ್ಯ ಇಲ್ಲದಿರುವ ಕಾರಣ ಸಾರ್ವಜನಿಕರು ಬಯಲು ಪ್ರದೇಶವನ್ನೇ ಅವಲಂಬಿಸಿದ್ದಾರೆ. ಮಹಿಳೆಯರು ನಿತ್ಯ ಸಮಸ್ಯೆ ಎದುರಿಸುತ್ತಿದ್ದು, ಕೂಡಲೇ ಸಾರ್ವಜನಿಕ ಶೌಚಗೃಹಗಳನ್ನು ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
50 ಲಕ್ಷ ರೂ. ಅನುದಾನ ಇದೆ: ಪಾಲಿಕೆ ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಮಾತನಾಡಿ, ಮಳೆಗಾಲದ ಸಮಸ್ಯೆ ಆಲಿಸಲು ಪಾಲಿಕೆಯಲ್ಲಿ 50 ಲಕ್ಷ ರೂ. ಅನುದಾನ ಇದೆ. ಅಗತ್ಯ ಬಿದ್ದ ವಾರ್ಡ್‌ಗಳಿಗೆ ಆದ್ಯತೆ ನೀಡಿ ಪರಿಹಾರ ಕಲ್ಪಿಸುವ ಯೋಜನೆಯನ್ನು ಅಧಿಕಾರಿಗಳು ಮಾಡಬೇಕು ಎಂದರು. ಉಪಮೇಯರ್ ವಾಣಿ ಜೋಶಿ, ಪಾಲಿಕೆ ವಿಪಕ್ಷ ನಾಯಕ ಮುಜಮಿಲ್ಲ ಡೋಣಿ ಇತರರಿದ್ದರು.
ಬೆಳಗಾವಿ ಮಹಾನಗರದಲ್ಲಿ ಚರಂಡಿಗಳ ಮೇಲಿರುವ ಕಟ್ಟಡ, ಅಂಗಡಿಗಳನ್ನು ತೆರೆವುಗೊಳಿಸಿ ಸ್ವಚ್ಛತೆ ಕೆಲಸ ಆರಂಭಿಸಲಾಗುವುದು. ಮಾರುಕಟ್ಟೆಯಲ್ಲಿ ಚರಂಡಿಗಳಲ್ಲಿ ಪ್ಲಾಸ್ಟಿಕ್ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. | ಶುಭ. ಬಿ. ಪಾಲಿಕೆ ಆಯುಕ್ತೆ