ಜಿಲ್ಲೆ

ನಾರಿಕೇಳದಲ್ಲಿ ಮೂಡಿದ ಗಣಪ

Dharwada - Vikram Nadiger

ವಿಕ್ರಮ ನಾಡಿಗೇರ ಧಾರವಾಡ
ಗಣೇಶ ಚತುರ್ಥಿ ಸಮಯದಲ್ಲಿ ಪಿಒಪಿ ಹಾಗೂ ರಾಸಾಯನಿಕ ವಸ್ತುಗಳಿಂದ ತಯಾರಿಸಿದ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡುವಂತಿಲ್ಲ ಮಾತು ಪ್ರತಿ ವರ್ಷ ಕೇಳಿ ಬರುತ್ತಿದೆ. ಆದಾಗ್ಯೂ ಸಂಪೂರ್ಣ ನಿಷೇಧ ಆಗಿಲ್ಲ. ಇದಕ್ಕೆ ಪರ್ಯಾಯ ಎಂಬಂತೆ ತಂಗಿನಕಾಯಿಯಲ್ಲಿ ಗಣೇಶ ಮೂರ್ತಿ ಕತ್ತನೆ ಕೆಲಸ ಸದ್ದಿಲ್ಲದೆ ನಡೆದಿದೆ.
ನಾರಿಕೇಳದಲ್ಲಿ ಕಲಾಕೃತಿಗಳ ಕೆತ್ತನೆಯಲ್ಲಿ ಇಲ್ಲಿನ ಕೆಲಗೇರಿಯ ಜಗದೀಶಗೌಡ ವಿರೂಪಾಕ್ಷಗೌಡ ಭಾವಿಕಟ್ಟಿ ಸಿದ್ಧ ಹಸ್ತರು. ಜಗದೀಶಗೌಡ ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನ ಉದ್ಯಾನ ನಿರ್ವಹಣೆ ಮಾಡುತ್ತಿದ್ದು, ಇವರ ಕೈಗೆ ಸಿಪ್ಪೆ ಸಹಿತ ತೆಂಗಿನಕಾಯಿ ಸಿಕ್ಕರೆ ಸಾಕು. ಅದು ಗಣೇಶ, ಬುದ್ಧ, ಬಸವ, ಗೂಬೆ, ಮನುಷ್ಯ ಹೀಗೆ ಯಾವ ಆಕಾರ ಬೇಕಾದರೂ ಪಡೆಯಬಹುದು.
ಜಗದೀಶಗೌಡ ತಂದೆ-ತಾಯಿ ಸಹ ಕಲಾವಿದರು. ಹೀಗಾಗಿ ಸಣ್ಣ ವಯಸ್ಸಿನಲ್ಲೇ ಇವರಲ್ಲಿ ಕಲೆ ಕರಗತವಾಗಿದೆ. ಮನೆಯಲ್ಲಿದ್ದ ಸಿಪ್ಪೆ ಸಹಿತ ತೆಂಗಿನಕಾಯಿಯಲ್ಲಿ ಕೆತ್ತನೆ ಮಾಡಿದ್ದ ಮೊಟ್ಟ ಮೊದಲ ಕಲಾಕೃತಿಯನ್ನು ಅವರ ಸಹೋದರ ಮಳಿಗೆಯಲ್ಲಿ ಇಟ್ಟುಕೊಂಡಿದ್ದರು. ಆ ಸುಂದರ ಕತ್ತೆನೆ ಕಂಡ ವ್ಯಕ್ತಿಯೊಬ್ಬರು ಹಣ ನೀಡಿ ಖರೀದಿಸಿದ್ದರು.ಅಂದಿನಿಂದ ಈ ಕಾರ್ಯದಲ್ಲೇ ಜೀವನ ಕಂಡುಕೊಳ್ಳಲು ಮುಂದಾಗಿದ್ದಾರೆ.
ನಾರಿಕೇಳದಲ್ಲಿನ ಗಣೇಶ ವಿಗ್ರಹಗಳಿಗೆ ಇದೀಗ ಸಾಕಷ್ಟು ಬೇಡಿಕೆ ಬರುತ್ತಿದೆ. ಈ ವಿಗ್ರಹ ಪ್ರತಿಷ್ಠಾಪನೆ ಮಾಡಿ ಪೂಜಿಸಿದ ಬಳಿಕ ನೀರಿನಲ್ಲಿ ವಿಸರ್ಜನೆ ಮಾಡಿ ಮಣ್ಣಿನಲ್ಲಿ ಹೂತರೆ ಮುಂದಿನ ದಿನಗಳಲ್ಲಿ ಕಲ್ಪ ವೃಕ್ಷವಾಗಿ ಬೆಳೆಯುತ್ತದೆ. ಇಲ್ಲವೆ ಪೂಜೆ ನಂತರ ಮನೆಯಲ್ಲಿ ಚಂದದ ವಸ್ತುಗಳ ಸಾಲಿಗೆ ಈ ಮೂರ್ತಿ ಸಹ ಸೇರಿಸಬಹುದು. ಹೀಗಾಗಿ ಎಲ್ಲ ಕಲಾಕೃತಿಗಳಿಗಿಂತ ಗಣೇಶನಿಗೆ ಬೇಡಿಕೆ ಹೆಚ್ಚಿದೆ.
ತೆಂಗಿನಕಾಯಿಯಲ್ಲಿ ಶಿವ, ಗಣಪತಿ, ಸಾಯಿಬಾಬಾ, ಮಹಾವೀರ, ಗೌತಮ ಬುದ್ಧ, ಸರ್.ಎಂ. ವಿಶ್ವೇಶ್ವರಯ್ಯ, ಅಬ್ದುಲ್ ಕಲಾಂ ಸೇರಿ ದೇವರ ಜತೆಗೆ ಅನೇಕ ಮಹನೀಯರ ಕಲಾಕೃತಿಗಳನ್ನು ಕೆತ್ತನೆ ಮಾಡಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಏರ್ಪಡಿಸುವ ಕೃಷಿ ಮೇಳ, ತೋಟಗಾರಿಕೆ ಮೇಳ, ಹಂಪಿ ಉತ್ಸವ ಹೀಗೆ ರಾಜ್ಯಾದ್ಯಂತ ನಡೆಯುವ ಉತ್ಸವಗಳಲ್ಲಿ ಇವರ ಕಲೇ ಪ್ರದರ್ಶನಗೊಂಡಿದ್ದು, ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ತಂಗಿನಕಾಯಿ ಮಾತ್ರವಲ್ಲದೆ ಪೇಪರ್ ಕ್ರಾಫ್ಟ್, ಕಸೂತಿ, ಐಸ್‌ಕ್ರೀಂ ಕಡ್ಡಿಗಳಿಂದ ಕಲಾಕೃತಿ ಸಿದ್ಧಪಡಿಸಿವ ಕಲೆ ಇವರಲ್ಲಿದೆ. ಐಸ್‌ಕ್ರೀಂ ಕಡ್ಡಿಗಳಿಂದ ಗೂಡುದೀಪ (ಆಕಾಶಬುಟ್ಟಿ), ಕಟ್ಟಿಗೆಯಿಂದ ಚಕ್ಕಡಿ ಹೀಗೆ ಹತ್ತು ಹಲವು ಕಲಾಕೃತಿಗಳನ್ನು ತಯಾರಿಸುವಲ್ಲಿ ನಿಪುಣರಾಗಿದ್ದಾರೆ.
ಪರಿಸರ ವಿನಾಶದತ್ತ ಸಾಗಿರುವ ಈ ಸಂದರ್ಭದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೇ ಜನರು ಹೆಚ್ಚಿನ ಆದ್ಯತೆ ನೀಡಿದರೆ, ಪರಿಸರ ರಕ್ಷಣೆಗಾಗಿ ಪರಿಸರ ಪ್ರೇಮಿಗಳು ತೊಟ್ಟಿರುವ ಸಂಕಲ್ಪ, ಜಲಮೂಲಗಳನ್ನು ಹಾಳು ಮಾಡದಂತೆ ನಡೆಸುತ್ತಿರುವ ಹೋರಾಟಕ್ಕೆ ಜಯ ಸಿಗುವಲ್ಲಿ ಯಾವುದೇ ಸಂದೇಹವೇ ಇಲ್ಲ.
ದುಡ್ಡಿಗೆ ಮಹತ್ವ ನೀಡಿಲ್ಲ: ಜಗದೀಶ ಅವರಲ್ಲಿ ಇಷ್ಟೆಲ್ಲ ಕಲೆ ಅಡಗಿದ್ದರೂ ಅದನ್ನು ಹಣಕ್ಕಾಗಿ ಮಾರುತ್ತಿಲ್ಲ. ಕೆತ್ತನೆ ಮಾಡಿದ ಕಲಾಕೃತಿಗಳನ್ನು ಹಣಕ್ಕೆ ಮಾರಾಟ ಮಾಡಿದ್ದು ಕಡಿಮೆ. ತಮ್ಮ ಕಲಾತ್ಮಕ ಕೆತ್ತನೆ ಕೊಂಡವರು ನೀಡಿದಷ್ಠ ಹಣವನ್ನು ಪಡೆಯುತ್ತಾರೆ. ಆದರೆ ಕಲೆ ಕಂಡು ಖುಷಿ ಪಟ್ಟು ಬೆನ್ನು ತಟ್ಟಿದ ಜನರಿಗೆ ಖುಷಿಯಾಗಿ ತಮ್ಮ ಕಲೆ ಗುರುತಿಸಿದ್ದಕ್ಕಾಗಿ ಕೊಟ್ಟಿದ್ದೇ ಹೆಚ್ಚು.
ಕೆತ್ತನೆ ಕೆಲಸ ಹೇಗೆ?: ಮೊದಲು ಕಾಯಿ ಮೇಲಿನ ಒಂದು ಪದರನ್ನು ತೆಗೆದು ಅದರ ಮೇಲೆ ಚಿತ್ರ ಬಿಡಿಸಲಾಗುತ್ತದೆ. ನಂತರ ಚಿತ್ರದ ಪ್ರಕಾರ ಕೆತ್ತನೆ ಮಾಡುತ್ತಾರೆ. ಸಂಪೂರ್ಣ ಆಕಾರ ಮೂಡಿದ ಬಳಿಕ ಟಚ್‌ವುಡ್ ಲೇಪನ ಮಾಡಿ ಒಣಗಲು ಬಿಡುತ್ತಾರೆ. ಕಲಾಕೃತಿ ಸಿದ್ಧವಾದ ಬಳಿಕ ಇನ್ನಷ್ಟು ಅಂದವಾಗಿ ಕಾಣಲು ಕೆಲವೊಮ್ಮೆ ಕಿರೀಟ, ಕಿವಿ ಆಭರಣ, ಕಣ್ಣು ಹೀಗೆ ವಿವಿಧ ಅಲಂಕಾರ ಸಹ ಮಾಡಲಾಗುತ್ತದೆ.

ತಂದೆಯಿಂದ ಈ ಕಲೆ ಕಲಿತಿದ್ದೇನೆ. ಸಣ್ಣ ವಯಸ್ಸಿನಿಂದಲೇ ತಂಗಿನಕಾಯಿ ಕೆತ್ತನೆ ಕಾರ್ಯ ನಡೆಸಿದ್ದೇನೆ. ಆದರೆ ಇದೀಗ ಬೆಳಕಿಗೆ ಬಂದಿದೆ. ಈ ಕಲೆಯನ್ನು ಯುವ ಪೀಳಿಗೆಗೆ ಸಹ ತಿಳಿಸಬೇಕು ಎಂಬ ಉದ್ದೇಶದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರುಡ್‌ಸೆಟ್ ಹೀಗೆ ವಿವಿಧ ಸಂಸ್ಥೆಗಳೊಂದಿಗೆ ಯುವಕರಿಗೆ ತರಬೇತಿ ನೀಡಲಾಗುತ್ತಿದೆ. ಈ ಕಾರ್ಯಕ್ಕೆ ಸಹೋದರರು, ಮಕ್ಕಳು ಸೇರಿ ಎಲ್ಲರೂ ಕೈ ಜೋಡಿಸಿದ್ದಾರೆ. ಜಗದೀಶಗೌಡ ಭಾವಿಕಟ್ಟಿ, ಕಲಾವಿದ