ಕಲಬುರಗಿ: ದೇಶದಲ್ಲಿ ನಾರಿಶಕ್ತಿ ಕಾಯ್ದೆ ಜಾರಿ ಆಗಿದ್ದು ಐತಿಹಾಸಿಕ ನಿರ್ಧಾರ. ಇಂಥ ನಿರ್ಧಾರಗಳಿಗೆ ಶರಣ ವಿಚಾರಧಾರೆಗಳೇ ಸ್ಫೂರ್ತಿ. ಮಹಿಳೆಯರಲ್ಲಿ ಶ್ರೇಷ್ಠ ಶಕ್ತಿ ಇದ್ದು, ಪರಮಾತ್ಮನೇ ನಮ್ಮಲ್ಲಿದ್ದಾನೆ ಎಂಬುದು ಕಂಡು ತೋರಿಸಿದ್ದು ಅಕ್ಕಮಹಾದೇವಿ ಎಂದು ಬೀದರ್ ಬಸವಗಿರಿಯ ಪ್ರಾಧ್ಯಾಪಕಿ ಡಾ.ಗಂಗಾಂಬಿಕಾ ಪಾಟೀಲ್ ಹೇಳಿದರು.
ಜಯನಗರದಲ್ಲಿನ ಅನುಭವ ಮಂಟಪದಲ್ಲಿ ಡಾ.ಬಿ.ಡಿ.ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಿಂದ ಶನಿವಾರ ಏರ್ಪಡಿಸಿದ್ದ ಎರಡು ದಿನಗಳ ಮಹಾದೇವಿ ಅಕ್ಕಗಳ ೧೩ನೇ ಸಮ್ಮೇಳನ, ಡಾ.ಬಿ.ಡಿ.ಜತ್ತಿ ವೈರಾಗ್ಯ ನಿಧಿ ಅಕ್ಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಸತ್ಯ ಶೋಧನೆಯಲ್ಲಿ ಜೀವನ ಸಾಗಿದೆ. ಸತ್ಯದ ಹುಡುಕಾಟವೇ ಜೀವನ ಎಂದು ಹೇಳಿದರು.
ಶ್ರೀಶೈಲ ಅಕ್ಕಮಹಾದೇವಿ ಚೈತನ್ಯ ಕೇಂದ್ರದ ಸಾಧಕಿ, ಸಮ್ಮೇಳನದ ಸರ್ವಾಧ್ಯಕ್ಷೆ ಡಾ.ಕರುಣಾದೇವಿ ಅಕ್ಕ ಅವರು ಅಕ್ಕಮಹಾದೇವಿ ಮತ್ತು ಅಲ್ಲಮಪ್ರಭುಗಳ ಸ್ವರ ವಚನಗಳನ್ನು ಹಾಡಿದರು.
ಸಮ್ಮೇಳನದ ಕಾರ್ಯಾಧ್ಯಕ್ಷೆ ಡಾ.ಜಯಶ್ರೀ ದಂಡೆ ಮಾತನಾಡಿ, ಬಿ.ಡಿ.ಜತ್ತಿ ಅವರು ಬಸವ ಸಮಿತಿ ಸ್ಥಾಪಿಸಿ, ಮಹಿಳೆಯರಿಗಾಗಿ ಹೆಣ್ಣು ಮಕ್ಕಳ ಶಾಲೆ ಆರಂಭಿಸಿದ್ದರು. ೨೦೦೧ರಲ್ಲಿ ಬಸವ ಸಮಿತಿ ಕಲಬುರಗಿಯಲ್ಲಿ ಆರಂಭವಾಯಿತು. ೮೨ರ ಇಳಿ ವಯಸ್ಸಿನ ವಿಲಾಸವತಿ ಖೂಬಾ ಅವರ ಉತ್ಸಾಹ ಎಲ್ಲ ಹೆಣ್ಣು ಮಕ್ಕಳಲ್ಲಿ ಬರಲಿ. ಜಯನಗರ ಅನುಭವ ಮಂಟಪದ ಗ್ರಂಥಾಲಯದಲ್ಲಿ ಸುಮಾರು ೧೦ ಸಾವಿರ ಪುಸ್ತಕಗಳಿದ್ದು, ಲಾಭ ಪಡೆಯಬೇಕು ಎಂದು ಶುಭ ಹಾರೈಸಿದರು.
ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ ಸ್ವಾಗತಿಸಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಅಭಿಮಾನ ಇರಬೇಕು. ಮಹಿಳೆಯರ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಯುವತಿಯರು ಮುಖ್ಯವಾಹಿನಿಗೆ ಬಂದು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಪ್ರಮುಖರಾದ ಶಾರದಾ ಜತ್ತಿ, ಅನಸೂಯಾ ನಡುಕಟ್ಟಿ, ಡಾ.ನೀಲಾಂಬಿಕಾ ಪೊಲೀಸ್ ಪಾಟೀಲ್ ಇತರರಿದ್ದರು. ಸುರೇಖಾ ಪಾಟೀಲ, ವಿಜಯಲಕ್ಷಿ ಚಿಕ್ಕಮಠ ನಿರ್ವಹಣೆ ಮಾಡಿದರು.