ತಿ.ನರಸೀಪುರ: ಪ್ರಸ್ತುತ ಸಮಾಜಕ್ಕೆ ನಾರಾಯಣಗುರುಗಳ ತತ್ವ-ಸಿದ್ಧಾಂತ ಮತ್ತು ಆದರ್ಶಗಳು ದಾರಿದೀಪ ಎಂದು ತಾಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಕಿರಗಸೂರು ಶಂಕರ್ ಹೇಳಿದರು.
ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಆರ್ಯ ಈಡಿಗರ ಸಂಘದ ಸಹಯೋಗದಲ್ಲಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ನಾರಾಯಣಗುರುಗಳ 169ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾರಾಯಣಗುರುಗಳು ಜಾತಿ ಮತ್ತು ಧರ್ಮದ ಗುರುವಲ್ಲ. ಅವರು ಲೋಕದ ಗುರು. ಸಮಾಜದಲ್ಲಿನ ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಮಹಾನ್ ದಾರ್ಶನಿಕ. ಮೇಲು, ಕೀಳು ತೊಡೆದುಹಾಕಿ ಸಮಾನತೆಯ ಸಮಾಜಕ್ಕೆ ಪ್ರಯತ್ನಿಸಿದ ಗುರುಗಳು. ಸಮಾಜಕ್ಕೆ ದಾರಿ ತೋರುವ ಪ್ರಯತ್ನವನ್ನು ಮಾಡಿದರು. ಶಿಕ್ಷಣಕ್ಕೆ ಮಹತ್ವ ನೀಡುವ ಜತೆಗೆ ಸಾಮಾಜಿಕ ಬದಲಾವಣೆಯಲ್ಲಿ ಅವರು ನಿರ್ವಹಿಸಿದ ಪಾತ್ರ ಪ್ರಮುಖವಾದುದು ಎಂದರು.
ವಿಚಾರವಾದಿ ಕರೋಹಟ್ಟಿ ಪ್ರಭುಸ್ವಾಮಿ ಮಾತನಾಡಿ, ನಾರಾಯಣಗುರುಗಳು ದುಶ್ಚಟಗಳನ್ನು ಬಿಟ್ಟು ಪರಿಶುದ್ಧ ಬದುಕು ನಡೆಸುವಂತೆ ಸಮಾಜಕ್ಕೆ ಸಂದೇಶ ಕೊಟ್ಟಿದ್ದಾರೆ. ತಿಳಿವಳಿಕೆಯೇ ಜ್ಞಾನ, ಜ್ಞಾನದ ಆನುಭವವೇ ದೇವರು. ದೇವರನ್ನು ಹುಡುಕಬೇಡಿ, ಆತ ನಿಮ್ಮಲ್ಲಿಯೇ ಇದ್ದಾನೆಂದು ತಿಳಿಸಿದ್ದಾರೆ ಎಂದು ಹೇಳಿದರು.
ಇದಕ್ಕೂ ಮೊದಲು ಗುಂಜಾ ನರಸಿಂಹಸ್ವಾಮಿ ದೇವಸ್ಥಾನದಿಂದ ಹೊರಟ ನಾರಾಯಣಗುರುಗಳ ಭಾವಚಿತ್ರವಿದ್ದ ಅಲಂಕೃತ ವಾಹನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಸಿ.ಕೃಷ್ಣ, ತಾಲೂಕು ಈಡಿಗರ ಸಂಘದ ಗೌರವಾಧ್ಯಕ್ಷ ಸಿದ್ದರಾಜು, ಉಪಾಧ್ಯಕ್ಷ ಗುರು, ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ರೇಣುಕಾ ಪ್ರಸಾದ್ ಮುಖಂಡರಾದ ವಾಸುದೇವ್, ಶ್ರೀಕಾಂತ್, ಪ್ರಶಾಂತ್ ಈಡಿಗರ್, ರವಿಶಂಕರ್, ಎನ್.ಕುಮಾರಸ್ವಾಮಿ, ಪಿ.ಆನಂದ್, ಶ್ರೀನಿವಾಸ್, ನಾಗರಾಜು, ಜೆ.ರಾಜು, ರವಿಶೇಖರ್, ರವಿ, ಸುರೇಶ್, ಮೂರ್ತಿ, ರಂಗಸ್ವಾಮಿ, ಯಶ್ವಂತ್ ಈಡಿಗರ್, ಕಿಟ್ಟುಗೌಡ, ಗುರುಸ್ವಾಮಿ, ಕೆಎಸ್‌ಐಸಿ ವೆಂಕಟಾಚಲ ಸೇರಿದಂತೆ ತಾಲೂಕು ಈಡಿಗರ ಸಂಘದ ಸದಸ್ಯರು, ಮುಖಂಡರು ಭಾಗವಹಿಸಿದ್ದರು.