ಚಿಕ್ಕಮಗಳೂರು: ನಗರದ ಉಪ್ಪಳ್ಳಿ ಬಡಾವಣೆಯ ಬಸವರಾಜ ಲೇಔಟ್‌ನಲ್ಲಿ ಸುಮಾರು ೪.೫೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉz್ದೆÃಶಿಸಿರುವ ಜಿಲ್ಲಾ ಶ್ರೀನಾರಾಯಣಗುರು ಸಮುದಾಯ ಭವನಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಶ್ರೀ ನಾರಾಯಣಗುರು ಸಮಿತಿ ಅಧ್ಯಕ್ಷ ಎಂ. ಕೃಷ್ಣಪ್ಪ ದಾಸರಹಳ್ಳಿ ನೇತೃತ್ವದ ತಂಡ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಮನವಿ ಸಲ್ಲಿಸಿತು.
ಜಿಲ್ಲೆಯಲ್ಲಿ ಈಡಿಗ ಜನಾಂಗದವರು ೧.೫೦ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಈ ಸಮಾಜವು ಆರ್ಥಿಕವಾಗಿ ಬಹಳ ಹಿಂದುಳಿದ ಸಮಾಜವಾಗಿರುತ್ತದೆ. ಸಮುದಾಯಕ್ಕೆ ಜಿಲ್ಲಾಮಟ್ಟದಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಸಮುದಾಯ ಭವನದ ಅವಶ್ಯಕತೆ ಇದೆ. ಹೀಗಾಗಿ ಸಮುದಾಯ ಭವನಕ್ಕೆ ಸರ್ಕಾರದ ವತಿಯಿಂದ ಅನುದಾನ ಬಿಡುಗಡೆ ಮಾಡಿಸಬೇಕು ಎಂದು ಮನವಿ ಮಾಡಿದರು.
ಸಮಜ ಬಾಂಧವರ ಹಲವಾರು ವರ್ಷಗಳ ಹೋರಾಟದ ಫಲವಾಗಿ ನಿವೇಶನವನ್ನು ೩೨ ಲಕ್ಷಕ್ಕೆ ಸಮಾಜ ಬಾಂಧವರು ನೀಡಿದ ದೇಣಿಗೆ ಹಣದಲ್ಲಿ ಖರೀದಿಸಲಾಗಿದೆ. ಈಗಾಗಲೇ ಸಮುದಾಯ ಭವನ ಕಾಮಗಾರಿ ೪೮ ಲಕ್ಷ ರೂ. ವೆಚ್ಚದಲ್ಲಿ ಪಿಲ್ಲರ್‌ಗಳನ್ನು ಅಳವಡಿಸಲು ಸಾಧ್ಯವಾಗಿದೆ. ಹೀಗಾಗಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದಲೂ ಅನುದಾನ ಬಿಡುಗಡೆ ಮಾಡಿಸಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ೨೫ ಲಕ್ಷ ರೂ. ಅನುಮೋದನೆಯಾಗಿ ೧೮.೭೫ಲಕ್ಷ ರೂ.ಬಿಡುಗಡೆಯಾಗಿದ್ದು, ಹಣದ ಕೊರತೆಯಿಂದಾಗಿ ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ಪ್ರಸ್ತುತ ಈ ನಿವೇಶನದಲ್ಲಿ ಮೂರು ಹಂತಸ್ತಿನ ಸಮುದಾಯ ಭವನ ಕಟ್ಟಲು ೪.೫೦ ಕೋಟಿ ರೂ. ಅಂದಾಜು ವೆಚ್ಚದ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಹಣ ಇಲ್ಲದ ಕಾರಣ ಕಾಮಗಾರಿ ಮುಂದುವರೆಸಲು ಸಾಧ್ಯವಾಗಿಲ್ಲ ಎಂದು ವಿವರಿಸಿದರು.
ಈ ಎಲ್ಲಾ ಅಂಶಗಳನ್ನು ಸಚಿವರು ಗಂಭೀರವಾಗಿ ಪರಿಗಣಿಸಿ, ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದ ವತಿಯಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಸಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಮಿತಿಯ ಕಾರ್ಯಕಾರಿ ಸದಸ್ಯರಾದ ಕೆ.ಎಂ.ಗುಣಶೇಖರ್, ಕೆ.ಸಿ.ಶಾಂತಕುಮಾರ್, ಅಯ್ಯಪ್ಪ, ಕುಂಜಪ್ಪ, ಮನೋಹರ್, ಚಂದ್ರಣ್ಣ ಕೋಟೆ, ಸಿ.ಆರ್.ಕುಮಾರ್, ಸಿ.ಆರ್.ಅಶೋಕ್ ಕುಮಾರ್, ಶ್ರೀಧರ್, ಚಂದ್ರು ಮತ್ತಿತರರಿದ್ದರು.