ಜಿಲ್ಲೆ

ನಾರಾಯಣಗುರು ಸಮಾನತೆಯ ಹರಿಕಾರ

ಮೈಸೂರು: ಸಮಾನತೆಯ ಹರಿಕಾರ ಶ್ರೀನಾರಾಯಣಗುರು ಅವರ ತತ್ವಾದರ್ಶವನ್ನು ಅಳವಡಿಸಿಕೊಳ್ಳಬೇಕು ಎಂದು ಸಂತ ಫಿಲೋಮಿನಾ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಶ್ರೀಧರಮೂರ್ತಿ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯುತ್ಸವ ಸಮಿತಿ ಸಹಯೋಗದಲ್ಲಿ ಕಿರುರಂಗ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇರಳದಲ್ಲಿ ಜನಿಸಿದ ಸಮಾಜ ಸುಧಾರಕರಲ್ಲಿ ಒಬ್ಬರಾಗಿದ್ದ ನಾರಾಯಣಗುರು ಅವರು ಜಾತಿ ತಾರತಮ್ಯ ನಿವಾರಿಸಿ ಸಮಾನತೆ ತರಲು ಚಳವಳಿ ರೂಪಿಸಿದರು. ಎಲ್ಲ ಮಹನೀಯರ ಗುಣಲಕ್ಷಣಗಳನ್ನು ಇಟ್ಟುಕೊಂಡು ಹೋರಾಟ ಮಾಡಿದ ಏಕೈಕ ಮಹಾಗುರು ನಾರಾಯಣ ಗುರು. ಭಾರತದ ಹಿರಿಮೆ ಏನು ಎಂದು ಮೊದಲಿಗೆ ತೋರಿಸಿಕೊಟ್ಟವರು ಸ್ವಾಮಿ ವಿವೇಕಾನಂದರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್. ಹಾಗೆಯೇ ನಾರಾಯಣ ಗುರು ಅವರು ಮಹಾನ್ ಮಾನವತಾವಾದಿ, ಸಾಮಾಜಿಕ ಪರಿವರ್ತನಾಕಾರ, ಹೋರಾಟಗಾರ, ಚಿಂತಕ, ಶಿಕ್ಷಕ, ಮಾರ್ಗದರ್ಶಕರೂ ಆಗಿದ್ದರು ಎಂದರು.

ಶಾಸಕ ಎಲ್.ನಾಗೇಂದ್ರ ಮಾತನಾಡಿ, ಹಿಂದಿನ ಕಾಲದಲ್ಲಿ ಜನರಿಗೆ ದೇವಾಲಯದ ಒಳಗಡೆ ಹೋಗಲು ಅವಕಾಶ ಇರದ ಸಂದರ್ಭದಲ್ಲಿ ನಾರಾಯಣಗುರು ಅವರು ದೇಗುಲ ಸ್ಥಾಪನೆ ಮಾಡುವ ಮೂಲಕ ಹೊಸ ಕ್ರಾಂತಿ ಮಾಡಿದರು ಎಂದು ತಿಳಿಸಿದರು.

ಈ ಹಿಂದೆ ಕೇರಳದಲ್ಲಿ ಮತಭೇದ ಹಾಗೂ ಸಾಮಾಜಿಕ ಪಿಡುಗು ಹೆಚ್ಚಿತ್ತು. ಇದನ್ನು ಕಡಿಮೆ ಮಾಡುವುದಕ್ಕೆ ನಾರಾಯಣಗುರು ಇಡೀ ಜೀವನವನ್ನೇ ಮುಡುಪಾಗಿಟ್ಟರು. ಸಂಸ್ಕೃತ ಭಾಷೆಯಲ್ಲಿ ಪಂಡಿತರಾಗಿ ಕೇರಳದ ಸಮಾಜದಲ್ಲಿ ಅಸ್ಪಶ್ಯತೆ ಸಮಸ್ಯೆ ಹೋಗಲಾಡಿಸಲು ಪ್ರಯತ್ನಿಸಿದರು ಎಂದರು.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ಮೈಸೂರು-ಚಾಮರಾಜನಗರ ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಎಂ.ಕೆ.ಪೋತ್‌ರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸುದರ್ಶನ್ ಇತರರು ಇದ್ದರು.