ರಾಯಚೂರಿನ ಕನ್ನಡ ಭವನದಲ್ಲಿ ಜಿಲ್ಲಾಡಳಿತದಿಂದ ಗುರುವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ, ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ರಾಘವೇಂದ್ರ, ಸಮಾಜದ ಮುಖಂಡ ರಂಗನಾಥ, ಅಶೋಕ ಚಾಗಭಾವಿ, ಹನುಮಂತ ಇದ್ದರು. 
ಜಿಲ್ಲೆ

ನಾರಾಯಣಗುರು ಮಾನವ ಕುಲದ ಮಹಾ ಸಂತ

ರಾಯಚೂರು: ಸಮಾಜದಲ್ಲಿನ ಕಂದಾಚಾರಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಬ್ರಹ್ಮಶ್ರೀ ನಾರಾಯಣಗುರು ಮಾನವ ಕುಲದ ಮಹಾ ಸಂತರಾಗಿದ್ದಾರೆ ಎಂದು ಗಂಗಾವತಿಯ ನ್ಯಾಯವಾದಿ ನಾಗರಾಜ ಗುತ್ತೇದಾರ ಹೇಳಿದರು.
ಸ್ಥಳೀಯ ಕನ್ನಡ ಭವನದಲ್ಲಿ ಜಿಲ್ಲಾಡಳಿತದಿಂದ ಗುರುವಾರ ಏರ್ಪಡಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ , ಕೇರಳದಲ್ಲಿ ಜಾತಿ ಮತಬೇಧಗಳು ಹೆಚ್ಚಾಗಿದ್ದ ಕಾಲದಲ್ಲಿ ನಾರಾಯಣಗುರು ತಾರತಮ್ಯ ಕಡಿಮೆ ಮಾಡಲು ಶ್ರಮಿಸಿದ್ದರು ಎಂದರು.
ದೇಶದಲ್ಲಿ ಸಂವಿಧಾನ ಜಾರಿಗೆ ಬಂದ ಮೇಲೆ ಸಮಾಜದಲ್ಲಿ ಎಲ್ಲರೂ ಸಮಾನರು ಎಂಬ ಚಿಂತನೆಗಳ ಮೂಲಕ ಮೇಲು ಕೀಳು ಎಂಬ ಅಸಮಾನತೆಯನ್ನು ಹೋಗಲಾಡಿಸಲು ನಾರಾಯಣಗುರು ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟುಕೊಂಡಿದ್ದರು.
ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ, ಅವರನ್ನು ಮೂಢ ನಂಬಿಕೆಯಿಂದ ಹೊರತರಬೇಕು. ಸಮಾಜದ ಬದಲಾವಣೆಗೆ ನಾರಾಯಣಗುರು ಅವರ ತತ್ತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜೀವನದಲ್ಲಿ ಒಳ್ಳೆಯ ವಿಚಾರ, ಆಲೋಚನೆಗಳನ್ನು ಮನಸ್ಸಿನಲ್ಲಿ ಮನನ ಮಾಡಿಕೊಳ್ಳಬೇಕು ಎಂದು ನಾಗರಾಜ ಗುತ್ತೇದಾರ ಹೇಳಿದರು.
ಇದಕ್ಕೂ ಮುಂಚೆ ಮಹಿಳಾ ಸಮಾಜದ ಹತ್ತಿರವಿರುವ ಜಿಲ್ಲಾ ಆರ್ಯ ಈಡಿಗ ಸಮಾಜದ ಕಾರ್ಯಾಲಯದಿಂದ ಕನ್ನಡ ಭವನದವರೆಗೆ ನಾರಾಯಣಗುರು ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಗೆ ವಿವಿಧ ವಾದ್ಯಮೇಳಗಳು ಮೆರಗು ತಂದಿದ್ದವು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ, ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ರಾಘವೇಂದ್ರ, ಸಮಾಜದ ಮುಖಂಡ ರಂಗನಾಥ, ಅಶೋಕ ಚಾಗಭಾವಿ, ಹನುಮಂತ ಮಲ್ಕಂದಿನ್ನಿ ಉಪಸ್ಥಿತರಿದ್ದರು.