ಶಿಕಾರಿಪುರ: ಜಾತಿ, ಮತ, ಪಂಥಗಳ ಕಟ್ಟಳೆ ಮೀರಿ ಸಮಾಜವಾಹಿನಿಯಲ್ಲಿ ಸರ್ವರೂ ಒಂದಾಗಿ ಬಾಳುವಂತಾಗಬೇಕು ಎಂಬ ಸಂದೇಶ ಸಾರಿ ಹೊಸ ಸಂಚಲನವನ್ನುಂಟು ಮಾಡಿದ ಮಹಾಗುರುವೇ ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ಪುರಸಭೆ ಅಧ್ಯಕ್ಷೆ ರೇಖಾಬಾಯಿ ಮಂಜುಸಿಂಗ್ ಹೇಳಿದರು.
ತಾಲೂಕು ಆಡಳಿತ ಮತ್ತು ತಾಲೂಕು ಈಡಿಗ ಸಮಾಜ ಆಯೋಜಿಸಿದ್ದ ಬೃಹ್ಮಶ್ರೀ ನಾರಾಯಣಗುರುಗಳ ಜಯಂತಿ ಕಾರ್ಯಕ್ರಮ ದಲ್ಲಿ ಮಾತನಾಡಿ, ಗುರುಗಳ ಸಾಮಾಜಿಕ ಕಳಕಳಿ ಅದ್ಭುತವಾಗಿತ್ತು. ಉಪೇಕ್ಷಿತ ಬಂಧುಗಳ ಎದೆಯಲ್ಲಿ ಅರಿವಿನ ದೀಪ ಹಚ್ಚಿದ ಮಹಾತ್ಮರು. ಅವರೊಬ್ಬ ಶತಮಾನ ಕಂಡ ಶ್ರೇಷ್ಠ ಗುರುಗಳು ಮತ್ತು ಯುಗಪುರುಷಾಗಿದ್ದರು. ಅವರ ಸಂದೇಶಗಳನ್ನು ನಾವು ಸದಾ ಮನನ ಮಾಡಬೇಕು. ಮನೆ ಮನೆಯಲ್ಲಿ ಅವರ ಸಂದೇಶದ ಪುಸ್ತಕ ಗಳಿರಬೇಕು. ಅವರು ಸಹನೆ, ಶಾಂತಿ ಮತ್ತು ಸಹಬಾಳ್ವೆ ಯ ಮಂತ್ರಗಳನ್ನು ಹಂಚಿದವರು ಎಂದರು.
ತಹಸೀಲ್ದಾರ್ ಎಂ.ಪಿ.ಕವಿರಾಜ್ ಮಾತನಾಡಿ, ಸಹಜೀವನ, ಸಹಭೋಜನ ನಮ್ಮ ಆದ್ಯತೆ ಯಾಗಬೇಕು. ಸದ್ವಿಚಾರಗಳು ನಮ್ಮನ್ನುಆಳಬೇಕು. ಸೌಹಾರ್ದತೆ ನಮ್ಮ ಉಸಿರಾಗಬೇಕು. ಕೇವಲ ಈಡಿಗ ಸಮಾಜಕ್ಕೆ ಅಷ್ಟೇ ಅಲ್ಲ. ಇಡೀ ಸಮಾಜ ಉದ್ದಾರದ ಹೆದ್ದಾರಿಯಲ್ಲಿ ಸಾಗಬೇಕು ಎಂದು ಬಯಸಿದ ಮಹನೀಯರು ಶ್ರೀ ನಾರಾಯಣ ಗುರುಗಳು. ಅವರ ಸಂದೇಶಗಳು ನಮ್ಮ ಮಾತಾಗಬೇಕು. ಅವರ ಆದರ್ಶಗಳು ನಮಗೆ ಸದಾ ಸ್ಫೂರ್ತಿ ಆಗಬೇಕು ಎಂದು ಹೇಳಿದರು.
ಈಡಿಗ ಸಮಾಜ ಅತ್ಯಂತ ಪರಿಶ್ರಮಿ ಮತ್ತು ಸ್ವಾಭಿಮಾನಿ ಸಮಾಜವಾಗಿದೆ. ವಿವಿಧ ಕ್ಷೇತ್ರದಲ್ಲಿ ಸಮುದಾಯದ ಬಂಧುಗಳು ಸಾಧನೆ ಮಾಡಿ ಸಮಾಜಕ್ಕೆ ಒಳ್ಳೆಯ ಹೆಸರು ಗಳಿಸಿಕೊಟ್ಟಿದ್ದಾರೆ. ಇಂದು ಕೂಡ ಸಾಕಷ್ಟು ಪ್ರಮಾಣದಲ್ಲಿ ವಿವಿಧ ಕ್ಷೇತ್ರದಲ್ಲಿ ಯುವಕರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ, ಇದೊಂದು ಶೌರ್ಯ ಮತ್ತು ಪರಾಕ್ರಮಿ ಸಮಾಜವಾಗಿದೆ. ಇನ್ನೂ ಗ್ರಾಮಾಂತರ ಪ್ರದೇಶಗಳಲ್ಲಿ ಶೈಕ್ಷಣಿಕ ವಾಗಿ, ಆರ್ಥಿಕ ವಾಗಿ ಮುಂದೆ ಬರಬೇಕಾಗಿದೆ. ಎಂದರು.