ಕೊಡಗು : ಒಂದೇ ಧರ್ಮ, ಒಂದೇ ದೇವರು, ಒಂದೇ ಜಾತಿ ಎಂಬ ತತ್ವವನ್ನು ಸಾರಿದ ನಾರಾಯಣ ಗುರುಗಳ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದರೆ ಸಮಾಜದಲ್ಲಿ ಸಮಾನತೆ ಮತ್ತು ಪ್ರೀತಿಯಿಂದ ಬದುಕಲು ಸಾಧ್ಯವಾಗಬಲ್ಲದು ಎಂದು ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕ ಪರಶುರಾಮ್ ಅಭಿಪ್ರಾಯ ಪಟ್ಟರು.
ಗೋಣಿಕೊಪ್ಪಲುವಿನ ದಲಿತ ಸಂಘರ್ಷ ಸಮಿತಿಯ ಕಚೇರಿಯಲ್ಲಿ ಶನಿವಾರ ನಡೆದ ಸಂತ ನಾರಾಯಣ ಗುರುಗಳ 169ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಹಿಂದೆ ಸಮಾಜದಲ್ಲಿ ಬೇರೂರಿದ್ದ ಜಾತಿಭೇದ, ಮಹಿಳಾ ಶೋಷಣೆಯ ಬಗ್ಗೆ ಧ್ವನಿ ಎತ್ತಿ ಸಮಾಧಾನಕರ ಪರಿಹಾರವನ್ನು ಕಂಡುಕೊಂಡ ಮಹಾನ್ ಸಂತ ನಾರಾಯಣಗುರುಗಳ ಆದರ್ಶ, ತತ್ವ ಮತ್ತು ಸಮಾಜ ಪ್ರೇಮವನ್ನು ಉಳಿಸಿಕೊಂಡರೆ ಮನುಷ್ಯ ದ್ವೇಷದಿಂದ ದೂರ ಉಳಿಯಬಹುದು ಎಂದು ಹೇಳಿದರು.
ದ.ಸಂ.ಸ ರಾಜ್ಯ ಸಮಿತಿ ಸದಸ್ಯ ಟಿ.ಎನ್.ಗೋವಿಂದಪ್ಪ ಮಾತನಾಡಿ, ಸಮಾಜ ಸುಧಾರಣೆಗೆ ಕ್ರಾಂತಿ ಮಾಡಿದ ಮಹಾ ಮಾನವತವಾದಿ ನಾರಾಯಣ ಗುರುಗಳ ಆದರ್ಶದ ಬದುಕು ಪ್ರತಿಯೊಬ್ಬರ ಜೀವನದ ಹಾದಿಯಾಗಬೇಕು ಎಂದು ಹೇಳಿದರು.
ಪತ್ರಕರ್ತ ಜಗದೀಶ್ ಜೋಡುಬೀಟಿ ಮಾತನಾಡಿ, ಜಾತಿ ಭೇದಗಳ ಅನಿಷ್ಟ ಪಿಡುಗನ್ನು ತೊಡೆದು ಹಾಕಲು ನಾರಾಯಣ ಗುರುಗಳ ಜೀವಿತಾವಧಿಯ ಸೇವೆ ಅಮೂಲ್ಯವಾದದ್ದು ಎಂದರು.
ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶವಿರಲಿಲ್ಲ. ಅಂತಹ ಕಾಲಘಟ್ಟದಲ್ಲಿ ನಾರಾಯಣಗುರುಗಳು ಸಮಾಧಾನಕರವಾದ ಆಧ್ಯಾತ್ಮಿಕ ಹೋರಾಟದ ಮೂಲಕ ಕೆಳ ವರ್ಗದವರಿಗೆ ಮತ್ತು ಶೋಷಿತ ಮಹಿಳೆಯರಿಗೆ ಸುಭಿಕ್ಷೆಯ ಸಮಾಜ ನಿರ್ಮಿಸಲು ಪಾತ್ರವಹಿಸಿದ್ದಾರೆ ಎಂದು ಹೇಳಿದರು.
ಗೋಣಿಕೊಪ್ಪ ಗ್ರಾ.ಪಂ ಮಾಜಿ ಸದಸ್ಯ ಅಬ್ದುಲ್ ಜಲೀಲ್, ಸವಿತ ಸಮಾಜದ ಅಧ್ಯಕ್ಷ ಗಣೇಶ್, ಸಮಾಜ ಸೇವಕ ಉದಯ್, ಸಂಘಟನಾ ಸಂಚಾಲಕ ಸಿಂಗಿ ಸತೀಶ್, ಸಾಂಸ್ಕೃತಿಕ ಸಂಘಟನೆ ಸಂಚಾಲಕ ಗಿರೀಶ್, ಜಿಲ್ಲಾ ಸಂಘಟನಾ ಸಂಚಾಲಕ ರಾಜೇಶ್, ತಾಲೂಕು ಸಮಿತಿ ಸಂಘಟನಾ ಸಂಚಾಲಕ ನಾಗೇಂದ್ರ, ಮಂಜು, ಗ್ರಾಮ ಸಂಚಾಲಕ ಚೆಲುವ, ಇಲಿಯಾಸ್, ರಘು, ಸುಬ್ಬಯ್ಯ, ನೌಶಾದ್, ನೂರ್ ಬಾಷಾ, ಪದಾಧಿಕಾರಿಗಳು ಸದಸ್ಯರುಗಳು ಇದ್ದರು.