ಜಿಲ್ಲೆ

ನಾರಾಯಣ ಆಸ್ಪತ್ರೆಯಲ್ಲಿ ನ್ಯೂರೋ ನಾವಿಗೇಷನ್ ಸಿಸ್ಟಂ ತಂತ್ರಜ್ಞಾನ ಸೇವೆ ಆರಂಭ

ಮೈಸೂರು: ಅತ್ಯಾಧುನಿಕ ‘ನ್ಯೂರೋ ನಾವಿಗೇಷನ್ ಸಿಸ್ಟಂ’ ತಂತ್ರಜ್ಞಾನ ಸೇವೆಯನ್ನು ನಾರಾಯಣ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾಗಿದೆ.

ಆಧುನಿಕ ಸಾಧನವನ್ನು ಸೇವೆಗೆ ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ವ್ಯಕ್ತಿಯ ಮಿದುಳಿನಲ್ಲಿರುವ ಗಡ್ಡೆಯನ್ನು ಅತಿ ನಿಖರವಾಗಿ ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಹಾಕಲು ಸಾಧ್ಯವಾಗುತ್ತಿದೆ ಎಂದು ಆಸ್ಪತ್ರೆಯ ಚಿಕಿತ್ಸಾ ನಿರ್ದೇಶಕ ಡಾ.ಎಂ.ಎನ್. ರವಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಸುಧಾರಿತ ತಂತ್ರಜ್ಞಾನ ಸೇವೆಯನ್ನು ನೀಡುತ್ತಿರುವ ಮೈಸೂರಿನ ಏಕೈಕ ಆಸ್ಪತ್ರೆಯಾಗಿದೆ. ಈ ತಂತ್ರಜ್ಞಾನವು ನರ ಶಸ್ತ್ರಚಿಕಿತ್ಸೆಯ ಕಾರ್ಯವಿಧಾನದಲ್ಲಿ ನಿಖರತೆ, ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಈ ಸೇವೆಯ ಪ್ರಾರಂಭದಿಂದ ರೋಗಿಗಳಿಗೆ ವಿಶ್ವದರ್ಜೆಯ ಚಿಕಿತ್ಸೆ ಲಭಿಸಲಿದೆ ಎಂದು ತಿಳಿಸಿದರು.

ಮಿದುಳಿನ ಶಸ್ತ್ರ ಚಿಕಿತ್ಸೆಗೆ ಸಿಟಿ ಸ್ಕಾೃನ್ ಹಾಗೂ ಎಂಆರ್‌ಐ ಚಿತ್ರಗಳನ್ನು ಬಳಸುವುದು ಸಾಮಾನ್ಯ ಸಂಗತಿ. ಆದರೆ ಅವುಗಳನ್ನು ಮುಂದಿಟ್ಟುಕೊಂಡು ವೈದ್ಯರು ತಮ್ಮ ಅನುಭವದ ಆಧಾರದ ಮೇಲೆ ಮಿದುಳಿನಲ್ಲಿ ಯಾವ ಭಾಗದಲ್ಲಿ ಗಡ್ಡೆ ಇದೆ, ಎಷ್ಟು ಗಾತ್ರದ್ದಾಗಿದೆ ಎಂದು ನಿರ್ಧರಿಸಿ ಶಸ್ತ್ರ ಚಿಕಿತ್ಸೆ ನಡೆಸಬೇಕಾಗಿತ್ತು.

ಆದರೆ, ಈ ನೂತನ ಸಾಧನವು ಸಿಟಿ ಸ್ಕಾೃನ್ ಹಾಗೂ ಎಂಆರ್‌ಐ ಮಾಹಿತಿಯನ್ನು ತನ್ನಲ್ಲಿ ಅಳವಡಿಸಿಕೊಂಡು, ಶಸ್ತ್ರಚಿಕಿತ್ಸೆ ವೇಳೆ ಮಾರ್ಗದರ್ಶನ ನೀಡಲಿದೆ.

ಇದರಿಂದಾಗಿ ಪೂರ್ಣ ಮಟ್ಟದಲ್ಲಿ ಗಡ್ಡೆಯನ್ನು ಅತಿ ಕಡಿಮೆ ಛೇದನದೊಡನೆ ತೆಗೆದು ಹಾಕಬಹುದಾಗಿದೆ. ಜತೆಗೆ ಸಮಯವೂ ಉಳಿಯಲಿದ್ದು, ರೋಗಿ ತ್ವರಿತಗತಿಯಲ್ಲಿ ಚೇತರಿಸಿಕೊಳ್ಳುತ್ತಾನೆ. ಈ ಸಾಧನವನ್ನು ಬೆನ್ನುಮೂಳೆ ಪ್ರದೇಶದ ಸಂಕೀರ್ಣ ಶಸ್ತ್ರಚಿಕಿತ್ಸೆಗೂ ಬಳಸಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.

ಆಸ್ಪತ್ರೆಯ ನೂರೋ ಸರ್ಜನ್ ಡಾ.ಗೌತಮ್ ಕುಗಾಟಿ ಮಾತನಾಡಿ, ಈ ಸುಧಾರಿತ ಸಿಸ್ಟಂ ಸಂಕೀರ್ಣವಾದ ಮಿದುಳು ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗಳನ್ನು ಹೆಚ್ಚಿನ ನಿಖರತೆ, ಸುರಕ್ಷತೆಯೊಂದಿಗೆ ನಿರ್ವಹಿಸಲು ವೈದ್ಯರಿಗೆ ಸಹಾಯ ಮಾಡುತ್ತದೆ. ಹೆಚ್ಚಿನ ರೆಸಲ್ಯೂಷನ್ ಚಿತ್ರಣವು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದು.

ಅಪಾಯ ಕಡಿಮೆ ಮಾಡುವುದು, ರೋಗಿಗಳಿಗೆ ಉತ್ತಮ ಫಲಿತಾಂಶವನ್ನು ಖಚಿತ ಪಡಿಸುತ್ತದೆ ಎಂದರು.

ನರರೋಗ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಎಚ್.ಎಚ್. ಹರ್ಷ ಮಾತನಾಡಿ, ಈ ತಂತ್ರಜ್ಞಾನದಿಂದ ಸರಿಸಾಟಿಯಿಲ್ಲದ ನಿಖರತೆಯೊಂದಿಗೆ ನರಶಸ್ತ್ರಚಿಕಿತ್ಸೆಯ ಕಾರ್ಯವಿಧಾನ ನಿರ್ವಹಿಸಲು ಸಾಧ್ಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂ. 9538052378 ಸಂಪರ್ಕಿಸಬಹುದು ಎಂದರು.

ನಾರಾಯಣ ಆಸ್ಪತ್ರೆಯ ಚಿಕಿತ್ಸಾ ನಿರ್ದೇಶಕ ಡಾ.ಎಂ.ಎನ್. ರವಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಡಾ.ಗೌತಮ್ ಕುಗಾಟಿ, ಡಾ.ಎಚ್.ಎಚ್. ಹರ್ಷ ಇದ್ದರು.