ಬಾಗಲಕೋಟೆ: ಯುವ ಪತ್ರಕರ್ತರು ದೇವಋಷಿ ನಾರದರ ಸಂವಾದ ಶೈಲಿ, ಹಾವ-ಭಾವ ಹಾಗೂ ವಾಕ್ಯ ರಚನೆಯನ್ನು ನೋಡಿ ಕಲಿಯಬೇಕು ಎಂದು ಆರ್‌ಎಸ್‌ಎಸ್‌ನ ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಾಂತದ ಪ್ರಚಾರಕ ಅರುಣಕುಮಾರ ಹೇಳಿದರು.
ನಗರದ ದೀಪಂ ಕಾಲೇನಿಯಲ್ಲಿರುವ ಆರ್‌ಎಸ್‌ಎಸ್‌ನ ಸಂಘಮಿತ್ರ ಕಾರ್ಯಾಲಯದಲ್ಲಿ ಸೇವಾ ಭಾರತಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ದೇವಋಷಿ ನಾಯದ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚಲನಚಿತ್ರ ನಿರ್ಮಾಪಕರು ನಾರದರನ್ನು ಹಾಸ್ಯಮಯವಾಗಿ ತೋರಿಸಿದ್ದಾರೆ. ಈ ಮೂಲಕ ನಾರದರು ಎಂದರೇ ಹಾಸ್ಯ ಮಾಡುವವರು ಎಂದು ನಾವು ತಿಳಿದುಕೊಂಡಿದ್ದೇವೆ. ಆದರೆ, ನಾರದರ ದೇವ, ಮಾನವ ಹಾಗೂ ರಾಕ್ಷಸರ ಲೋಕಕ್ಕೆ ಪ್ರವೇಶ ಹೊಂದಿದ್ದ ಏಕೈಕ ವ್ಯಕ್ತಿ. ಪತ್ರಕರ್ತರು ನಾರದರಷ್ಟೇ ಶುಭೃವಾದ ಚಾರಿತ್ರ‍್ಯ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ವೇದವ್ಯಾಸ ಋಷಿಗಳು ರಚಿಸಿರುವ ನಾಲ್ಕು ವೇದಗಳು ಜನಸಾಮಾನ್ಯರಿಗೆ ಅರ್ಥವಾಗುವ ಹಾಗೆ ಬರೆಯಿರಿ ಎಂದು ನಾರದರು ಹೇಳಿದ ನಂತರವೇ ವೇದವ್ಯಾಸರಿಂದ ಭಾಗವತ್ ರಚನೆಯಾಯಿತು ಎಂದು ತಿಳಿಸಿದರು.
ಇಲೆಟ್ರಾನಿಕ್ ಮಾಧ್ಯಮದಲ್ಲಿ ಛಾಪು ಮಾಡಿರುವ ಅನೇಕ ದಿಗ್ಗಜರ ಮೂಲ ಮುದ್ರಣ ಮಾಧ್ಯಮವಾಗಿದೆ. ಮುದ್ರಣ ಮಾಧ್ಯಮದಲ್ಲಿ ತಿದ್ದಿ ಕೊಳ್ಳಲು ಅವಕಾಶಗಳಿರುತ್ತವೆ. ಅದೇ ಟಿವಿ ಮಾಧ್ಯಮಗಳಲ್ಲಿ ಅವಕಾಶಗಳು ಬಹಳಷ್ಟು ಕಡಿಮೆ. ಯುವ ಪತ್ರಕರ್ತರು ಒಂದು ತಿರುಳಿನೊಂದಿಗೆ ಎರಡು ಪುಟಗಟ್ಟಲೆ ಗಟ್ಟಿಯಾಗಿ ಬರೆಯುಂತಾಗಬೇಕು. ಇದಕ್ಕಿಂತ ಮೊದಲು ಮಾತೃ ಭಾಷೆಯ ಮೇಲೆ ಹಿಡಿತ ಸಾಽಸಿಕೊಂಡು ಮಾಧ್ಯಮ ಲೋಕಕ್ಕೆ ಕಾಲಿಡಬೇಕು ಎಂದು ಸಲಹೆ ನೀಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆನಂದ ದಲಭಂಜನ ಮಾತನಾಡಿ, ಎರಡು ದಶಕಗಳ ಹಿಂದೆ ಸುದ್ದಿಗಳನ್ನು ಕಳುಹಿಸಲು ಬಹಳಷ್ಟು ಪ್ರಯಾಸ ಪ್ರಸಂಗಗಳು ಇದ್ದವು. ಇಂದು ಕಾಲ ಬದಲಾಗಿದೆ. ಆಧುನಿಕ ತಂತ್ರಜ್ಞಾನ ಎಲ್ಲವನ್ನು ಸುಲಲಿತಗೊಳಿಸಿದೆ. ಇಂದಿನ ದಿನಗಳಲ್ಲಿ ಸೋಷಿಯಲ್ ಮಿಡಿಯಾಗಳ ಮೂಲಕ ಜನರಿಗೆ ತ್ವರಿತಗತಿಯಲ್ಲಿ ಸುದ್ದಿಗಳನ್ನು ತಲುಪಿಸುವ ಜತೆಗೆ ಅವುಗಳಿಂದ ಆದಾಯ ಸಹ ಪಡೆಯಬಹುದಾಗಿದೆ ಎಂದರು.
ಆರ್‌ಎಸ್‌ಎಸ್‌ನ ಜಿಲ್ಲಾ ಸಂಘಚಾಲಕ ಚಂದ್ರಶೇಖರ ದೊಡಮನಿ, ಮಾಜಿ ಶಾಸಕ ವೀರಣ್ಣ ಚರಂತಿಮಠ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.