ಜಿಲ್ಲೆ

ನಾಯಿಯಂತೆ ಅಲೆದೆ...ಕಾಲು ಹಿಡಿಯೋದು ಬಾಕಿ!

ತುಮಕೂರು ಡೆಸ್ಕ್

ಬೆಂಗಳೂರು: ಕಾಮಗಾರಿಗೆ ಟೆಂಡರ್​ ಕರೆದ ಅನುದಾನ ವಾಪಸ್​ ಪಡೆಯಲು ಬರುವುದಿಲ್ಲ. ಸಿಎಂ ಸಿದ್ದರಾಮಯ್ಯ ಅಡಿಗಲ್ಲು ಹಾಕಿದ ಕಾಮಗಾರಿ ಹಣ ಹಿಂಪಡೆದಿರುವುದು ಅವಮಾನಿಸಿದಂತಾಗಿದೆ.

ಇದಕ್ಕಾಗಿ 50 ಬಾರಿ ಪತ್ರ ಬರೆದೆ, ನಾಯಿಯಂತೆ ಅಲೆದೆ, ನಿಮ್ಮ ಕಾಲು ಹಿಡಿಯುವುದೊಂದೇ ಬಾಕಿಯಿದೆ.

ತುಮಕೂರು ಗ್ರಾಮಾಂತರದ ಬಿಜೆಪಿ ಶಾಸಕ ಬಿ.ಸುರೇಶ್​ಗೌಡ ರೋಷಾವೇಶದ ಮಾತುಗಳಿವು, ವಿಧಾನಸಭೆಯಲ್ಲಿ ಮಾರ್ದನಿಸಿ ಸ್ಪೀಕರ್​ ಆದಿಯಾಗಿ ಇಡೀ ಸದನ ಅತ್ತ ತಿರುಗಿತು. ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಸುರೇಶ್​ ಗೌಡ ಏರುಧ್ವನಿಯಲ್ಲಿ ಮಾತಾಡುವುದು ಮುಂದುವರಿಸಿದ್ದರೆ ಅಕ್ಕಪಕ್ಕದಲ್ಲಿ ಕುಳಿತಿದ್ದವರು ಸಿಟ್ಟು ತಮಣಿಗೆ ಪ್ರಯತ್ನಿಸಿದರು. ನಂತರ ಸ್ಪೀಕರ್​ ಜೋರುಧ್ವನಿಯಲ್ಲಿ ಮಾತನಾಡುವುದು ಬಿಡಿ, ಸಚಿವರ ಉತ್ತರವನ್ನಾದರೂ ಕೇಳಿ ಎಂದು ಸಮಾಧಾನಪಡಿಸಿದರು. ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿ, ಶಾಸಕರ ನೋವು ಅರ್ಥವಾಗುತ್ತದೆ. ಆರ್ಥಿಕ ಇಲಾಖೆ ಅಧಿಕಾರಿಗಳ ಜತೆಗೆ ಮಾತನಾಡಿ ಆದಷ್ಟು ಬೇಗ ಹಣ ಬಿಡುಗಡೆಗೆ ವ್ಯವಸ್ಥೆ ಮಾಡುವೆ ಎಂದು ಭರವಸೆ ನೀಡಿದರು.

ಆಗಿದ್ದೇನು ?: ತುಮಕೂರು ಗ್ರಾಮಾಂತರ ಕ್ಷೇತ್ರದ ನಾಗವಲ್ಲಿ ಗ್ರಾಮದ ಮೈಸೂರು ಮಹಾರಾಜರ ಕಾಲದ ಶಾಲಾ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ. ಈ ಶಾಲೆಯನ್ನು ಮೇಲ್ದರ್ಜೆಗೇರಿಸಲಾಗಿದ್ದು, ಇಲಾಖೆ ಅಧಿಕಾರಿಗಳ ಅನುಮೋದನೆ ಪ್ರಕಾರ 1.40 ಕೋಟಿ ರೂ. ವೆಚ್ಚದಲ್ಲಿ ನೂತನ ಶಾಲಾ ಕಟ್ಟಡ ನಿರ್ಮಿಸಲು ಟೆಂಡರ್​ ಕೂಡ ಕರೆಯಲಾಗಿದೆ. ಈ ಮಧ್ಯೆ ಒಂದೂವರೆ ವರ್ಷದ ಸಿಎಂ ಸಿದ್ದರಾಮಯ್ಯ ಅವರು ಶಾಲಾ ಕಟ್ಟಡಕ್ಕೆ ಅಡಿಗಲ್ಲು ಕೂಡ ಹಾಕಿ ಬಂದಿದ್ದಾರೆ. ಟೆಂಡರ್​ ಕರೆದಾದ ಮೇಲೆ ಜಿ.ಪಂ.ಗೆ ಪತ್ರ ಬರೆದು ಹಣ ವಾಪಸ್​ಗೆ ತಿಳಿಸಿದ್ದು, ಶಾಸಕ ಸುರೇಶ್​ ಗೌಡ ಆಕ್ರೋಶಕ್ಕೆ ಕಾರಣ. ಹಣ ವಾಪಸ್​ಗೆ ಸೂಚಿಸಿದ ನಂತರ ಸಿಎಂ ಗುದ್ದಲಿ ಪೂಜೆ ನೆರವೇರಿಸಿದ, ಕಾಮಗಾರಿಗೆ ಕರೆದ ಟೆಂಡರ್​ ಪ್ರಕ್ರಿಯೆ ಸ್ಥಗಿತವಾಗಿದೆ. ಪುನಾರಂಭಿಸಲು ಪತ್ರ ಬರೆದು, ಸಚಿವರನ್ನು ಖುದ್ದು ಭೇಟಿಯಾದ ಬಳಿಕವೂ ಬಗೆಹರಿದಿಲ್ಲ. ಬೆಳಗಾವಿಯ ಸುವರ್ಣ ವಿಧಾನಸೌಧಕ್ಕ ಸಿಎಂ ಹಾಕಿದ್ದ ಅಡಿಗಲ್ಲು ಸಮೇತ ಬಂದಿದ್ದೆ. ಅನುದಾನ ವಾಪಸ್​ ರದ್ದುಪಡಿಸುವುದಾಗಿ ಹೇಳಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಇದೇ ಕಾರಣದಿಂದ ಸಿಟ್ಟು ಬಂತು ಎಂದು ನಂತರ ಸದನದ ಹೊರಗೆ ಸುರೇಶ್​ ಗೌಡ ಮಾಹಿತಿ ನೀಡಿದರು.