ಜಿಲ್ಲೆ

ನಾಯಿ ಹಾವಳಿ ತಡೆಗೆ ಕಾರ್ಯಾಚರಣೆ

ಶಾಸಕ ಕೆ.ಷಡಕ್ಷರಿ ನೇತೃತ್ವದಲ್ಲಿ ತುರ್ತು ಸಭೆ, ಬಾಲಕಿಯ ಕುಟುಂಬಕ್ಕೆ ನೆರವಿನ ಭರವಸೆ

ತಿಪಟೂರು: ತಾಲೂಕಿನ ಐಯ್ಯನಬಾವಿ ಗ್ರಾಮದಲ್ಲಿ ಬೀದಿ ನಾಯಿ ದಾಳಿಗೆ 6 ವರ್ಷದ ಬಾಲಕಿ ಮೃತಪಟ್ಟ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ತಾಲೂಕು ಆಡಳಿತ, ನಾಯಿಗಳ ಸೆರೆ ಕಾರ್ಯಾಚರಣೆ ಮತ್ತು ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಲಿದೆ.

ಸೋಮವಾರ ತಾಪಂ ಆಡಳಿತಾಧಿಕಾರಿಗಳು, ನಗರಸಭೆ ಆಯುಕ್ತರು ಮತ್ತು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕರ ತುರ್ತು ಸಭೆ ನಡೆಸಿದ ಶಾಸಕ ಕೆ.ಷಡಕ್ಷರಿ. ಶನಿವಾರದ ಘಟನೆ ಬಾಲಕಿಯ ಕುಟುಂಬ ಸೇರಿ ಎಲ್ಲರಿಗೂ ನೋವಾಗಿದೆ. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಜಾಗ್ರತೆ ವಹಿಸಬೇಕಾದ್ದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ನಗರ ಸೇರಿ ಗ್ರಾಮೀಣ ಪ್ರದೇಶದಲ್ಲಿ ಬೀದಿ ನಾಯಿಗಳನ್ನು ಸೆರೆ ಹಿಡಿದು ಅವುಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡುವ ಕೆಲಸಕ್ಕೆ ಈಗಾಗಲೇ ಕಾರ್ಯಾದೇಶ ನೀಡಲಾಗಿದೆ. ಸದಸ್ಯದಲ್ಲೇ ನಾಯಿಗಳ ಹಾವಳಿ ಮಟ್ಟಹಾಕಲು ಕಾರ್ಯಾಚರಣೆ ಪ್ರಾರಂಭವಾಗಲಿದೆ. ಬೀದಿ ನಾಯಿಗಳ ಸೆರೆ ಕಾರ್ಯಾಚರಣೆಗೆ ಯಾರಾದರೂ ಅಡ್ಡಿಪಡಿಸಿದರೆ ಅಂತಹವರ ವಿರುದ್ಧವೂ ಪ್ರಕರಣ ದಾಖಲಿಸಲಾಗವುದು ಎಂದು ಎಚ್ಚರಿಕೆ ನೀಡಿದರು.

ಬಾಲಕಿ ಕುಟುಂಬಕ್ಕೆ ಸರ್ಕಾರದಿಂದ ಬರುವ ಸಹಾಯಧನವನ್ನು ಹೆಚ್ಚಿನ ಪ್ರಮಾಣದಲ್ಲಿ ಕೊಡಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ತಾಪಂ ಇಒ ಎಚ್​.ಎಂ.ಸುದರ್ಶನ್​ ಮಾತನಾಡಿ, ಸ್ಥಳಿಯ ಸಂಸ್ಥೆಗಳ ಆದಾಯದ ಶೇ.2 ಭಾಗವನ್ನು ನಾಯಿಗಳ ಸೆರೆ ಮತ್ತು ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ಬಳಸುವ ಅವಕಾಶವಿದೆ. ಅಗತ್ಯ ಬಿದ್ದಲ್ಲಿ ನಗರವ್ಯಾಪ್ತಿಯನ್ನೂ ಇದರಲ್ಲಿ ಸೇರಿಸಲಾಗುವುದು. ಸದ್ಯದಲ್ಲೇ ಕಾರ್ಯಾಚರಣೆ ಶುರುವಾಗಲಿದೆ ಎಂದರು.

ನಗರಸಭೆ ಆಯುಕ್ತ ವಿಶ್ವೇಶ್ವರ ಬದರಗಡೆ ಮಾತನಾಡಿ, ಒಂದು ನಾಯಿ ಸೆರೆಗೆ 200 ರೂ. ಮತ್ತು ಹಿಡಿದ ನಾಯಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿ 5 ದಿನಗಳ ಕಾಲ ಅವುಗಳ ಯೋಗಕ್ಷೇಮ ನೋಡಿಕೊಂಡು ಪುನ@ ಅವುಗಳನ್ನು ಸೆರೆ ಹಿಡಿದ ಸ್ಥಳಕ್ಕೇ ಬಿಡುವ ಕಾರ್ಯಾಚರಣೆಗೆ ಒಂದು ನಾಯಿಗೆ ತಲಾ 1400 ರೂ. ರಂತೆ ಟೆಂಡರ್​ ಅಂತಿಮವಾಗಿದೆ. ನಗರ ವ್ಯಾಪ್ತಿಯ ಶೆಡ್​ನಲ್ಲಿ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಶೀಘ್ರದಲ್ಲಿ ಪ್ರಾರಂಭವಾಗಲಿದೆ ಎಂದರು.

ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕೆ.ಜಿ.ನಂದೀಶ್​ ಮಾತನಾಡಿ, ನಗರದಲ್ಲಿ ಅಂದಾಜು 1500 ಬೀದಿ ನಾಯಿಗಳಿವೆ. ಎರಡು ಹಂತದಲ್ಲಿ ಕಾರ್ಯಾಚರಣೆ ನಡೆಸಲು ಉದ್ದೇಶಿಸಲಾದ್ದು, ಮೊದಲ ಹಂತದಲ್ಲಿ ನಾಯಿಗಳಿಗೆ ಆಂಟಿ ರೇಬೀಸ್​ ವ್ಯಾಕ್ಸಿನ್​ ನೀಡಲಾಗುವುದು. ಎರಡನೇ ಹಂತದಲ್ಲಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ನಡೆಸಿ, ಅವುಗಳನ್ನು ಮೂರು ದಿನಗಳ ಕಾಲ ನಿಗಾದಲ್ಲಿ ಇರಿಸಿ. ಹೊಲಿಗೆ ಬಿಚ್ಚಿದ ನಂತರ ಅವುಗಳಿರುವ ಜಾಗಕ್ಕೆ ಬಿಡಲಾಗುವುದು ಎಂದರು.

ನಾಯಿಗಳ ಸೆರೆ ಕಾರ್ಯಾಚರಣೆ ಮತ್ತು ಶಸ್ತ್ರ ಚಿಕಿತ್ಸೆಗೆ ಅನುದಾನ ಕಡಿಮೆಯಾದರೆ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಅನುದಾನ ಹೆಚ್ಚಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ತಾಲೂಕು ಆಡಳಿತ ಭರವಸೆ ನೀಡಿರುವಂತೆ 1400 ರೂ. ನಲ್ಲಿ ಒಂದು ನಾಯಿಗೆ ್ತ ಶಸ್ತ್ರ ಚಿಕಿತ್ಸೆ ಮಾಡಿಸುವುದು ಕಷ್ಟ. ವ್ಯಕ್ತಿಯ ಒಂದು ಸಣ್ಣ ಗಾಯಕ್ಕೆ ಬ್ಯಾಂಡೇಜ್​ ಮಾಡಿಸಲು ಕನಿಷ್ಠ 1 ಸಾವಿರ ಇರುವಾಗ. 1400 ರೂ.ನಲ್ಲಿ ನಾಯಿಗೆ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ನಡೆಸಿ,

ಅದನ್ನು 3 ದಿನಗಳ ಕಾಲ ನಿಗಾಘಟಕದಲ್ಲಿ ಇರಿಸಿ, ಅದರ ಯೋಗಕ್ಷೇಮ ನೋಡಿಕೊಂಡು ಮತ್ತೆ ನಾಯಿಯನ್ನು ಹಿಡಿದ ಜಾಗಕ್ಕೇ ಬಿಡುವುದು ಇಷ್ಟು ಕಡಿಮೆ ಹಣದಲ್ಲಿ ಸಾಧ್ಯವಿಲ್ಲ ಎಂದು ಶಾಸಕರು ತಿಳಿಸಿದರು. ನಗರಸಭೆ ಅಧ್ಯಕ್ಷೆ ಎ.ಎಸ್​.ಯಮುನಾ ಹಾಗೂ ಸದಸ್ಯರು ಇದ್ದರು.