ಜಿಲ್ಲೆ

ನಾಯಿ ನಿರ್ವಹಣೆ ಕೇಂದ್ರಕ್ಕೆ ಸಹಕರಿಸಿ

ಕಲಬುರಗಿ: ಮಹಾನಗರ ಪಾಲಿಕೆ ವ್ಯಾಪ್ತಿ ಸೇರಿ ಜಿಲ್ಲೆಯಲ್ಲಿ ಕಳೆದ ೨೦೨೨ರಿಂದ ೨೦೨೩ರವರೆಗೆ ೧೪೪೭ ಬೀದಿ ನಾಯಿಗಳು ಕಚ್ಚಿದ ಪ್ರಕರಣಗಳು ದಾಖಲಾಗಿದ್ದು, ಇವುಗಳನ್ನು ನಿಯಂತ್ರಿಸಲು ಕಲ್ಯಾಣ ಕರ್ನಾಟಕ ಪ್ರಾಣಿ ದಯಾ ಹಾಗೂ ಗೋ ಸೇವಾ ಸಂಸ್ಥೆಯಿಂದ ನಾಯಿ ನಿರ್ವಹಣಾ ಕೇಂದ್ರ ಸ್ಥಾಪಿಸಲು ಉದ್ದೇಶಿಸಿದ್ದು, ಸರ್ಕಾರ ಅದಕ್ಕೆ ಸಹಕಾರ ನೀಡಬೇಕು ಎಂದು ಸಂಸ್ಥೆ ಸಂಸ್ಥೆ ಅಧ್ಯಕ್ಷ ಸಾದಿಕ್ ಅಲಿ ಮನವಿ ಮಾಡಿದರು.

ನಗರದ ಹೊರವಲಯದ ಅವರಾದ ಗ್ರಾಮದ ಬಳಿ ಗೋಶಾಲೆ ಆರಂಭಿಸಿದ್ದು, ಅದರ ಅಡಿಯಲ್ಲಿಯೇ ನಾಯಿ ನಿರ್ವಹಣಾ ಕೇಂದ್ರ ಸ್ಥಾಪಿಸಲು ಎಲ್ಲ ಸೌಲಭ್ಯ, ಯೋಜನೆಯನ್ನು ಹೊಂದಲಾಗಿದೆ. ಜಿಲ್ಲೆಯಲ್ಲಿ ಮಕ್ಕಳ ಮೇಲೆ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು, ಉತ್ತಮ ವಾತಾವರಣದಲ್ಲಿ ನಾಯಿಗಳನ್ನು ನಿರ್ವಹಣೆ ಮಾಡಬೇಕಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಸ್ಥೆ ಅಡಿ ಅವರಾದ (ಬಿ) ಗ್ರಾಮದಲ್ಲಿ ಒಂದುವರೆ ಎಕರೆ ಜಾಗದಲ್ಲಿ ಬೀದಿ ನಾಯಿಗಳ ಹಾವಳಿ ತಡೆಗಟ್ಟುವ, ನಿರ್ವಹಣೆ, ಊಟ, ಉಪಚಾರ, ಅನಾರೋಗ್ಯದ ಬಗ್ಗೆ ಪ್ರತ್ಯೇಕವಾಗಿ ಆಸ್ಪತ್ರೆ ಸೇರಿ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲು ಅವಕಾಶವಿದೆ. ಆದ್ದರಿಂದ ಈ ಕಾರ್ಯಕ್ಕೆ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಸಹಕಾರಿಸಬೇಕು ಎಂದು ವಿನಂತಿಸಿದರು.
ಕಾರ್ಯದರ್ಶಿ ಮಂಜುನಾಥ ನಾಲವಾರಕ್ ಇತರರಿದ್ದರು.