ಕುಶಾಲನಗರ : ಕುಶಾಲನಗರ ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೈರಪ್ಪನಗುಡಿ ಸೋಮವಾರಪೇಟೆ ರಸ್ತೆಗೆ ಹೊಂದಿಕೊಂಡಂತೆ ಇರುವ ಕಾಡಿನಲ್ಲಿ ಚಿರತೆಯೊಂದು ಉರುಳಿಗೆ ಸಿಲುಕಿ ನರಳಾಡಿ, ಬಳಿಕ ಅದರಿಂದ ಬಿಡಿಸಿಕೊಂಡು ಪರಾರಿಯಾಗಿದೆ.
ಬಾಣಾವಾರ ಅರಣ್ಯ ಸಮೀಪದ ಮನೆಯಿಂದ ಸಾಕು ನಾಯಿಯನ್ನು ಕಚ್ಚಿಕೊಂಡು ಕಾಡಿಗೆ ತೆರಳುವಾಗ ಕಾಡಂಚಿನಲ್ಲಿ ಅಳವಡಿಸಿದ್ದ ಉರುಳಿಗೆ ಸಿಲುಕಿಕೊಂಡಿದೆ. ಚಿರತೆ ಚೀರಾಟ ಕೇಳಿ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ. ಗ್ರಾಮಸ್ಥರ ಶಬ್ದಕ್ಕೆ ಮತ್ತಷ್ಟು ಬೆದರಿದ ಚಿರತೆ ಉರುಳನ್ನು ಬಿಡಿಸಿಕೊಂಡು ಅರಣ್ಯದ ಕಡೆಗೆ ಓಡಿ ಪರಾರಿಯಾಗಿದೆ. ಸ್ಥಳಕ್ಕೆ ಅರಕಲಗೂಡು ತಾಲೂಕಿನ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಸ್ಥಳದಲ್ಲಿ ಸಾಕುನಾಯಿ ಮೃತದೇಹ ಪತ್ತೆಯಾಗಿದೆ.
ಇದೇ ಚಿರತೆ ಕಳೆದ ಕೆಲವು ದಿನಗಳ ಹಿಂದೆ ಅಳುವಾರದಲ್ಲಿ ಮನೆಯ ಹಿಂದೆ ಕಟ್ಟಿದ್ದ ಮೇಕೆಯನ್ನು ಕೊಂದು ಹಾಕಿತ್ತು. ಹಾಸನ-ಕೊಡಗು ಗಡಿ ಭಾಗದಲ್ಲಿ ಸಂಚರಿಸುತ್ತಿರುವ ಈ ಚಿರತೆ ಆಗಾಗ್ಗೆ ಗ್ರಾಮಸ್ಥರಿಗೆ ಕಾಣಿಸಿಕೊಳ್ಳುತ್ತಿದ್ದು, ಚಿರತೆ ಹಾವಳಿಯಿಂದ ಸಿದ್ದಲಿಂಗಪುರ, ಅಳುವಾರ, ಭೈರಪ್ಪನಗುಡಿ ವ್ಯಾಪ್ತಿಯ ಗ್ರಾಮಸ್ಥರು ಭಯಭೀತರಾಗಿದ್ದಾರೆ.