ಆಲೂರು: ನಾಯಿಗಳು ಕಚ್ಚಿದರೆ ತಕ್ಷಣ ರೋಗ ನಿರೋಧಕ ಲಸಿಕೆ ಪಡೆಯದಿದ್ದರೆ ರೋಗ ಉಲ್ಬಣಗೊಂಡು ಸಾವು ಖಚಿತ ಎಂದು ಪಾಳ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ತಿಳಿಸಿದರು.
ಪಾಳ್ಯ ಪಶು ಆಸ್ಪತ್ರೆಯಲ್ಲಿ ಸಾಕು ನಾಯಿಗಳಿಗೆ ಹುಚ್ಚು ನಾಯಿಗಳ ವಿರುದ್ಧ ರೇಬಿಸ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಾಕು ನಾಯಿಗಳಿಗೆ ಹುಚ್ಚು ನಾಯಿಗಳು ಕಚ್ಚಿದಾಗ ರೋಗ ಎಡತಾಕದಂತೆ ಮುಂಜಾಗ್ರತ ಕ್ರಮವಾಗಿ ರೋಗ ನಿರೋಧಕ ಲಸಿಕೆ ನೀಡಲಾಗುತ್ತಿದೆ. ಮಾಲೀಕರು ತಪ್ಪದೆ ತಮ್ಮ ಸಾಕು ನಾಯಿಗಳಿಗೆ ಲಸಿಕೆ ಕೊಡಿಸಿಕೊಳ್ಳಬೇಕು ಎಂದರು.
ಪಶು ವೈದ್ಯಾಧಿಕಾರಿ ಡಾ. ಸೌಭಾಗ್ಯ ರವರು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಲಸಿಕೆ ನೀಡುವ ಅಭಿಯಾನ ಪ್ರಾರಂಭಿಸಲಾಗಿದೆ. ಸೆ.30 ರವರೆಗೆ ನಾಯಿಗಳಿಗೆ ಲಸಿಕೆ ನೀಡಲಾಗುವುದು. ಸೆ.28 ಲೂಯಿಸ್ ಪಾಶ್ಚರ್ ನಿಧನರಾದ ದಿನವಾಗಿದ್ದು ಅಂದು ವಿಶ್ವ ರೇಬೀಸ್ ದಿನವನ್ನಾಗಿ ಆಚರಿಸಲಾಗುವುದು. ಈಗಾಗಲೆ ಸೆ. 1 ರಿಂದ 16 ವರೆಗೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ, ಜನಸಾಮಾನ್ಯರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಲಾಗಿದೆ. ಸೆ.16 ರಿಂದ ಎಲ್ಲ ಸಾಕು ನಾಯಿ, ಬೆಕ್ಕುಗಳಿಗೆ ಉಚಿತವಾಗಿ ಲಸಿಕೆ ಹಾಕುವ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಸಾಕು ನಾಯಿಗಳನ್ನು ಆದಷ್ಟು ಬೀದಿಗೆ ಬಿಡದಂತೆ ಮಾಲೀಕರು ಜಾಗ್ರತೆ ವಹಿಸಬೇಕು ಎಂದರು.
ಲಸಿಕೆ ಪಡೆದುಕೊಂಡಿದ್ದ ನಾಯಿ ಮನುಷ್ಯರಿಗೆ ಕಚ್ಚಿದರೂ, ತಕ್ಷಣ ರೋಗ ನಿರೋಧಕ ಲಸಿಕೆಯನ್ನು ಆಸ್ಪತ್ರೆಯಲ್ಲಿ ಪಡೆದುಕೊಳ್ಳಬೇಕು. ರೋಗ ಮಾರಕ ರೋಗವಾಗಿದ್ದು ಉಲ್ಬಣವಾದರೆ ಸಾವು ಖಚಿತ. 2019 ರಲ್ಲಿ ನಾಯಿ, ಬೆಕ್ಕುಗಳ ಬಗ್ಗೆ ಸರ್ವೆ ಮಾಡಿದ ಆಧಾರದಲ್ಲಿ ಶೇ.25 ರಷ್ಟು ಲಸಿಕೆಯನ್ನು ಸರ್ಕಾರ ನೀಡಿದೆ. ಎಷ್ಟು ನಾಯಿಗಳನ್ನು ಕರೆತಂದರೂ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದರು.