ಮದ್ದೂರು: ಚಿರತೆ ನಾಯಿಯನ್ನು ಕಚ್ಚಿಕೊಂಡು ಹೋಗುವ ಸಂದರ್ಭ ಕಾರಿನ ಚಾಲಕನೊಬ್ಬ ತೆಗೆದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮದ್ದೂರಿನಿಂದ ಆಲೂರು ಗ್ರಾಮದ ಬೀರೇಶ್ವರ ದೇವಸ್ಥಾನದ ಮಾರ್ಗವಾಗಿ ಕೆ. ಹೊನ್ನಲಗೆರೆಗೆ ತಡರಾತ್ರಿ ವ್ಯಕ್ತಿಯೊಬ್ಬರು ಕುಟುಂಬದೊಂದಿಗೆ ತೆರಳುತ್ತಿದ್ದಾಗ ಚಿರತೆಯೊಂದು ಪೊದೆಯಿಂದ ರಸ್ತೆಗೆ ಬಂದಿದೆ. ಈ ವೇಳೆ ಕಾರಿನ ಚಾಲಕ ಚಿರತೆ ವಿಡಿಯೋವನ್ನು ಸೆರೆಹಿಡಿಯಲು ಮುಂದಾದಾಗ ಕಾರಿನಲ್ಲಿದ್ದ ಮಹಿಳೆ ವಿಡಿಯೋ ಮಾಡುವುದು ಬೇಡ, ಸುರಕ್ಷಿತವಾಗಿ ಮನೆಗೆ ಹೋಗೋಣ, ಭಯವಾಗುತ್ತದೆ ಎನ್ನುತ್ತಾರೆ. ಆದರೂ ಚಾಲಕ ಕಾರಿನ ಕಿಟಕಿ ಬಾಗಿಲು ಭದ್ರಪಡಿಸಿ ಚಿರತೆಯನ್ನು ನಿಧಾನವಾಗಿ ಹಿಂಬಾಲಿಸಿ ವಿಡಿಯೋ ಮಾಡಿದ್ದಾರೆ. ಚಿರತೆಯು ರಸ್ತೆ ಪಕ್ಕವಿದ್ದ ನಾಯಿಯ ಕತ್ತು ಕಚ್ಚಿಕೊಂಡು ಪೊದೆಗೆ ಎಳೆದೊಯ್ಯುವ ದೃಶ್ಯ ಸೆರೆಯಾಗಿದೆ.
ಈ ವೇಳೆ ಕೆ. ಹೊನ್ನಲಗೆರೆ ಕಡೆಯಿಂದ ಇಬ್ಬರು ಬೈಕ್ ಸವಾರರು ಬರುತ್ತಿದ್ದಾಗ ಕಾರಿನ ಚಾಲಕ, ನಾಯಿ ಬಂದು ನಿಮ್ಮ ಪ್ರಾಣ ಉಳಿಸಿದೆ ನೀವು ಬೇಗ ಮನೆ ಸೇರಿಕೊಳ್ಳಿ ಎಂದು ಸಲಹೆ ನೀಡುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಕಾರಿನಲ್ಲಿದ್ದವರ ಹಾಗೂ ಬೈಕ್ ಸವಾರರ ಮಾಹಿತಿ ತಿಳಿದುಬಂದಿಲ್ಲ.
ಮದ್ದೂರು ತಾಲೂಕಿನ ಆಲೂರು, ನೀಲಕಂಠನಹಳ್ಳಿ, ಕೆ.ಹೊನ್ನಲಗೆರೆ, ತಿಪ್ಪೂರು, ವೈದ್ಯನಾಥಪುರ, ತೈಲೂರು ಸೇರಿದಂತೆ ಇತರ ಗ್ರಾಮಗಳಲ್ಲಿ ಚಿರತೆಗಳಿರುವುದು ಕಂಡು ಬಂದಿದ್ದರಿಂದ ಈ ಭಾಗದ ಗ್ರಾಮಸ್ಥರು ಮತ್ತು ರೈತರು ಆತಂಕಕ್ಕೀಡಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಗಳ ಚಲನವಲನ ತಿಳಿಯಲು ಸಿಸಿ ಕ್ಯಾಮಾರಾ ಅಳವಡಿಸಬೇಕು. ಚಿರತೆ ಸೆರೆಗೆ ಬೋನು ಇಟ್ಟು ಈ ಭಾಗದ ಜನ ಮತ್ತು ಜಾನುವಾರುಗಳನ್ನು ರಕ್ಷಿಸಬೇಕು ಎಂದು ಮುಖಂಡ ಬ್ಯಾಡರಹಳ್ಳಿ ಶಿವಕುಮಾರ್ ಆಗ್ರಹಿಸಿದ್ದಾರೆ.